ವರಮಹಾಲಕ್ಷ್ಮೀ ಹಬ್ಬ: ಕೇವಲ 4,500ರೂ.ಗೆ ಮೈಸೂರು ಸಿಲ್ಕ್ ಸೀರೆ
ಮೈಸೂರು, ಜೂನ್ 30: ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಬಂಪರ್ ಕೊಡುಗೆಯನ್ನು ನೀಡುತ್ತಿದೆ. ಕೇವಲ 4500 ರೂ.ಗಳಿಗೆ ಮೈಸೂರು ಸಿಲ್ಕ್ ಸೀರೆಯನ್ನು ಪಡೆಯಬಹುದಾಗಿದೆ.
ರೇಷ್ಮೆ ಸಚಿವ ಸಾ.ರಾ. ಮಹೇಶ್ ಈ ವಿಚಾರವನ್ನು ತಿಳಿಸಿದ್ದಾರೆ. ನಿಗಮದ ಸೀರೆಗಳು ಈಗ 10 ಸಾವಿರದಿಂದ 3 ಲಕ್ಷದವರೆಗೂ ಲಭ್ಯವಿದೆ. ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಸೀರೆ ನೀಡಬೇಕು ಎನ್ನುವ ಉದ್ದೇಶದಿಂದ ವರಮಹಾಲಕ್ಷ್ಮೀ ಹಬ್ಬದಿಂದ ಈ ಕೊಡುಗೆ ನೀಡಲಾಗುವುದು ಬೇಡಿಕೆ ಇರುವರೆಗೂ ಇದು ಮುಂದುವರೆಯಲಿದೆ ಎಂದರು.
ಮೈಸೂರಿನ ಹೆಗ್ಗುರುತು ಮೈಸೂರು ಸಿಲ್ಕ್ಸ್‌ಗೆ ಪೇಟೆಂಟ್ ಇರುವುದರಿಂದ ಇತರರು ಇದನ್ನು ತಯಾರಿಸಿ ಮಾರಾಟ ಮಾಡುವಂತಿಲ್ಲ, ಸರ್ಕಾರಿ ಸ್ವಾಮ್ಯದ ಮೈಸೂರು ರೇಷ್ಮೆ ನೇಯ್ಗೆ ಕಾರ್ಖಾನೆಯಿಂದ ಮಾತ್ರ ಮೈಸೂರು ಸಿಲ್ಕ್ ಉತ್ಪನ್ನವಾಗುತ್ತಿದ್ದು, ಅನಧಿಕೃತವಾಗಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಜಾಗೃತ ದಳ ರಚಿಸಲಾಗಿದೆ. ಎಂದು ಮಹೇಶ್ ತಿಳಿಸಿದ್ದಾರೆ.

ಪ್ರವಾಸಿ ತಾಣಗಳಲ್ಲಿ ಕೆಎಸ್‌ಐಸಿ ಮಳಿಗೆ ತೆರೆದು ಸೀರೆ ಮಾರಾಟ ಮಾಡಲಾಗುವುದು. ಮೈಸೂರು ರೇಷ್ಮೆ ನೇಯ್ಗೆ ಕಾರ್ಖಾನೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು, ಮೈಸೂರಿನಲ್ಲೂ ರೇಷ್ಮೆ ಗೂಡು ಮಾರುಕಟ್ಟೆ ತೆರೆಯಲು ಚಿಂತನೆ ನಡೆಸಲಾಗಿದೆ ಎಂದರು.












Click it and Unblock the Notifications