MLC Election: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮೈಸೂರಿನಲ್ಲಿ ಸಕಲ ಸಿದ್ಧತೆ
ಜೂನ್ 3ರಂದು ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಚುನಾವಣಾಧಿಕಾರಿಗಳು ಸಹ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಣದಲ್ಲಿ ಒಟ್ಟು 11 ಮಂದಿ ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಈ ಚುನಾವಣೆಯಲ್ಲಿ ಚಿಹ್ನೆ ಇರುವುದಿಲ್ಲ ಎಂಬುದು ವಿಶೇಷವಾಗಿದೆ. ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ 24 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ 21,549 ಮಂದಿ ಮತದಾರರು ಇದ್ದು, ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಶೇ.50 ರಷ್ಟು ಮತದಾರರು ಇದ್ದಾರೆ. ಮೈಸೂರು ಜಿಲ್ಲೆಯಲ್ಲಿ 10,549 ಮಂದಿ ಮತದಾರರು ಇದ್ದರೆ, ಮಂಡ್ಯದಲ್ಲಿ 5403, ಹಾಸನದಲ್ಲಿ 3526 ಮತ್ತು ಚಾಮರಾಜನಗರದಲ್ಲಿ 2181 ಮಂದಿ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಮಹಿಳೆಯರಿಗಿಂತ ಪುರುಷ ಮತದಾರರೇ ಹೆಚ್ಚಿದ್ದಾರೆ.
ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯ ಜೂನ್ 6ರಂದು ನಡೆಯಲಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜೂನ್ 3ರ ಬೆಳಗ್ಗೆ 5 ರಿಂದ ಮಧ್ಯರಾತ್ರಿ 12ರವರೆಗೆ ಮತ್ತು ಜೂನ್ 6ರ ಮತ ಎಣಿಕೆ ದಿನದಂದು ಬೆಳಗ್ಗೆ 6 ರಿಂದ ಜೂನ್ 7ರ ಬೆಳಗ್ಗೆ 5 ರವರೆಗೆ ಕಲಂ 144ರ ರೀತ್ಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಸಂಭ್ರಮಾಚರಣೆಗೆ ನಿಷೇಧ
ಈ ದಿನಗಳಂದು ಚುನಾಯಿತ ಅಭ್ಯರ್ಥಿಗಳ ಮೆರವಣಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಾಸದ ಮನೆಗಳ ಮುಂದೆ ಪಟಾಕಿ ಸಿಡಿಸುವುದು, ಮತ ಎಣಿಕೆ ಕೇಂದ್ರದಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ಹಾಗೂ ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ಐದು ಮಂದಿಗಿಂತ ಹೆಚ್ಚು ಜನ ಗುಂಪುಗೂಡುವುದು, ಸಭೆ ಸಮಾರಂಭಗಳನ್ನು ನಡೆಸುವುದು ಹಾಗೂ ಪ್ರಚೋದನಾಕಾರಿ ಭಾಷಣ ಮಾಡುವುದು, ಧ್ವನಿವರ್ಧಕ, ಡಿ.ಜೆ. ಉಪಯೋಗಿಸುವುದು ಮತ್ತು ಬೈಕ್ ರ್‍ಯಾಅಲಿ ನಡೆಸುವುದನ್ನು ನಿಷೇಧಿಸಲಾಗಿದೆ.
ನೈಋತ್ಯ ಪದವೀಧರರ ಕ್ಷೇತ್ರದ 14, ನೈಋತ್ಯ ಶಿಕ್ಷಕರ ಕ್ಷೇತ್ರದ 14 ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ 14 ಕೌಂಟಿಂಗ್ ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಹ ಪಾಲ್ಗೊಂಡು ಪೂರ್ಣಗೊಳಿಸಬೇಕು ಎಂದು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಪದವೀಧರರ ಕ್ಷೇತ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಡಾ.ಜೆ.ಸಿ.ಪ್ರಕಾಶ್ ತಿಳಿಸಿದರು.
ಮತದಾರರ ವಿವರ
ಒಟ್ಟು ಮತದಾರರು - 21,549
ಮಹಿಳಾ ಮತದಾರರು - 9550
ಪುರುಷ ಮತದಾರರು - 11,998
ತೃತೀಯ ಲಿಂಗಿ ಮತದಾರರು - 1












Click it and Unblock the Notifications