ಮೈಸೂರು ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಹೊರಡುವ 8 ರೈಲುಗಳು, ಪಟ್ಟಿ
ಮೈಸೂರು, ಡಿಸೆಂಬರ್ 28: ಮೈಸೂರು ನಗರದ ನವೀಕೃತ ಅಶೋಕಪುರಂ ರೈಲು ನಿಲ್ದಾಣಕ್ಕೆ ಮತ್ತೆ 8 ರೈಲು ಸೇವೆಗಳನ್ನು ವಿಸ್ತರಣೆ ಮಾಡಲಾಗಿದೆ. ನಗರದ ರೈಲು ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸುಮಾರು 32.5 ಕೋಟಿ ರೂ. ವೆಚ್ಚದಲ್ಲಿ ಅಶೋಕಪುರಂ ರೈಲು ನಿಲ್ದಾಣವನ್ನು ವಿಸ್ತರಣೆ ಮಾಡಿ, ಅಭಿವೃದ್ಧಿಗೊಳಿಸಲಾಗಿದೆ. ಸದ್ಯ ಇದು ಮೈಸೂರು ನಗರದ ಎರಡನೇಯ ಅತಿ ದೊಡ್ಡ ರೈಲು ನಿಲ್ದಾಣವಾಗಿದೆ.
ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅಶೋಕಪುರಂ ರೈಲು ನಿಲ್ದಾಣಕ್ಕೆ 8 ರೈಲು ಸೇವೆಗಳನ್ನು ವಿಸ್ತರಣೆ ಮಾಡಿರುವ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಯಾವ-ಯಾವ ರೈಲುಗಳನ್ನು ವಿಸ್ತರಣೆ ಮಾಡಲಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.

ಸಂಸದರು ತಮ್ಮ ಪೋಸ್ಟ್‌ನಲ್ಲಿ, 'ಶೀಘ್ರದಲ್ಲೇ ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದವರೆಗೆ 8 ರೈಲುಗಳ ಸೇವೆ ವಿಸ್ತಾರಗೊಳ್ಳಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಟ್ರ್ಯಾಕ್ 1 ರಿಂದ 5ರವರೆಗೆ ಸಂಪೂರ್ಣ ವಿದ್ಯುದೀಕರಣಗೊಳಿಸಿˌ ಅಶೋಕಪುರಂ ಯಾರ್ಡ್‌ನ ಮೂಲಕ ರೈಲು ಸೇವೆ ಕಾರ್ಯಾರಂಭಗೊಂಡು ಜನತೆಗೆ ಅನುಕೂಲವಾಗುವಂತೆ ಮಾಡಿದ ನೈಋತ್ಯ ರೈಲ್ವೆ ಇಲಾಖೆಯ ಪರಿಶ್ರಮ ಹಾಗೂ ಅವರ ಕಾರ್ಯಕ್ಷಮತೆ ಪ್ರಶಂಸನೀಯವಾಗಿದೆ ಇದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ' ಎಂದು ಹೇಳಿದ್ದಾರೆ.
ಅಶೋಕಪುರಂಗೆ ವಿಸ್ತರಣೆಯಾಗಿರುವ ರೈಲುಗಳು
* MAS-MYS-MAS ಕಾವೇರಿ ಎಕ್ಸ್‌ಪ್ರೆಸ್ (16021/ 22)
* MAS-MYS-MAS ಎಕ್ಸ್‌ಪ್ರೆಸ್ (12609/ 10)
* SBC-MYS-SBC ಮಾಲ್ಗುಡಿ ಎಕ್ಸ್‌ಪ್ರೆಸ್ (20624/ 23)
* KCG-MYS-KCG ಎಕ್ಸ್‌ಪ್ರೆಸ್ (12785/ 86)
* SBC-MYS-SBC ಮೆಮು (06525/ 26)
* SBC-MYS-SBC ಮೆಮು (06559/ 60)
* SBC-MYS-SBC ಮೆಮು (06255/ 56)
* SBC-MYS ಮೆಮು (06257/ 58)
ಸಂಸದರು ತಮ್ಮ ಪೋಸ್ಟ್‌ನಲ್ಲಿ, 'ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಸರ್ಕಾರದ ರೈಲ್ವೆ ಖಾತೆ ಸಚಿವರಾದ ಸನ್ಮಾನ್ಯ ಶ್ರೀ ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ಭಾರತೀಯ ರೈಲು ಸೇವೆ ಸಂಪೂರ್ಣವಾಗಿ ಪರಿವರ್ತನೆಗೊಂಡಿದೆ ಎಂಬುದಕ್ಕೆ ಈ ಪ್ರಯತ್ನ ಸಾಕ್ಷಿಯಾಗಿದೆ. ಅಶೋಕಪುರಂವರೆಗಿನ ರೈಲು ಸೇವೆಗಳ ವಿಸ್ತರಣೆಯು ಮೈಸೂರು ಮತ್ತು ಹತ್ತಿರದ ಪ್ರದೇಶದ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ನೈಋತ್ಯ ರೈಲ್ವೆಯು ಸಂಪರ್ಕ ಮತ್ತು ಮೂಲ ಸೌಕರ್ಯವನ್ನು ಸುಧಾರಿಸುವಲ್ಲಿ ದಾಪುಗಾಲು ಹಾಕುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ' ಎಂದು ಹೇಳಿದ್ದಾರೆ.
ಮೊದಲು ಅಶೋಕಪುರಂ ರೈಲು ನಿಲ್ದಾಣ ಮೂರು ಪ್ಲಾಟ್ ಫಾರಂ ಹೊಂದಿತ್ತು. ಈಗ ಎರಡು ಹೊಸ ಪ್ಲಾಟ್ ಫಾರಂ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಮೈಸೂರಿಗೆ ಬರುವ ರೈಲುಗಳನ್ನು ಚಾಮರಾಜನಗರ ಕಡೆಗೆ ವಿಸ್ತರಣೆ ಮಾಡಬಹುದಾಗಿದೆ. ಅಲ್ಲದೇ ಹೆಚ್ಚು ರೈಲುಗಾಡಿಗಳ ನಿಲುಗಡೆಗೆ, ಸ್ವಚ್ಛಗೊಳಿಸಲು ಸಹಕಾರಿಯಾಗಿದೆ.
ಅಶೋಕಪುರಂ ರೈಲು ನಿಲ್ದಾಣದಲ್ಲಿ 2ನೇ ಪ್ರವೇಶದ್ವಾರವನ್ನು ನಿರ್ಮಾಣ ಮಾಡಲಾಗಿದ್ದು, ನೀರು ತುಂಬುವ ವ್ಯವಸ್ಥೆಯನ್ನು ಮಾಡಲಾಗಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಪಾರ್ಕಿಂಗ್ ಲಾಟ್ ಸಹ ನಿರ್ಮಾಣ ಮಾಡಲಾಗಿದೆ.












Click it and Unblock the Notifications