ಮೈಸೂರು ನಗರಕ್ಕೂ ತಟ್ಟಲಿದೆಯಾ ಕುಡಿಯುವ ನೀರಿನ ಸಮಸ್ಯೆ? ಮುನ್ಸೂಚನೆಗಳೇನು..?

ಮೈಸೂರು, ಮಾರ್ಚ್ 21: ಅತ್ತ ಜಲಮೂಲಗಳಾದ ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತವಾಗುತ್ತಿದ್ದಂತೆಯೇ ಇತ್ತ ಮೈಸೂರು ನಗರಕ್ಕೂ ಅದರ ಬಿಸಿ ತಟ್ಟುವ ಸಾಧ್ಯತೆಗಳು ಹೆಚ್ಚಾಗಿದ್ದು, ಈಗಾಗಲೇ ನಗರದ ಹಲವು ಬಡಾವಣೆಗಳಲ್ಲಿ ನೀರಿನ ಬವಣೆ ಕಾಣಲಾರಂಭಿಸಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಉಲ್ಭಣಗೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ವಾಡಿಕೆಯ ಮುಂಗಾರು ಮಳೆ ಸುರಿಯದ ಕಾರಣಗಳಿಂದಾಗಿ ಕೆಆರ್ ಎಸ್ ಜಲಾಶಯ ಭರ್ತಿಯಾಗಿಲ್ಲ. ಜತೆಗೆ ಈಗಾಗಲೇ 124 ಅಡಿಯ ಜಲಾಶಯದಲ್ಲಿ ನೀರಿನ ಪ್ರಮಾಣ 87 ಅಡಿಗೆ ತಲುಪಿದ್ದು, ಇಲ್ಲಿಂದಲೇ ಮೈಸೂರು, ಮಂಡ್ಯ, ಬೆಂಗಳೂರಿಗೆ ನೀರಿನ ಸರಬರಾಜಾಗ ಬೇಕಾಗಿರುವುದರಿಂದ ಸಮಸ್ಯೆಗಳು ಮೈಸೂರು ನಗರಕ್ಕೂ ತಟ್ಟುವ ಸಾಧ್ಯತೆಗಳು ಕಂಡು ಬಂದಿದ್ದು, ಕೆಲವು ಬಡಾವಣೆಯಲ್ಲಿ ನೀರಿಗಾಗಿ ಪರದಾಟ ಶುರುವಾಗಿದೆ.

Drought Is Drinking Water Problem Going To Hit Mysuru City To

ಮೊದಲಿಗೆ ಹೋಲಿಸಿದರೆ ಮೈಸೂರು ನಗರ ನಿರೀಕ್ಷೆ ಮೀರಿ ಬೆಳೆಯುತ್ತಿದ್ದು, ಹೊಸ ಬಡಾವಣೆಗಳು ಸೃಷ್ಟಿಯಾಗುತ್ತಿವೆ. ಈ ಬಡಾವಣೆಗಳಿಗೂ ನೀರನ್ನು ಸರಬರಾಜು ಮಾಡಲೇ ಬೇಕಾಗಿರುವುದರಿಂದ ನೀರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮ ಎಲ್ಲ ಬಡಾವಣೆಗಳಿಗೂ ನೀರನ್ನು ಪೂರೈಕೆ ಮಾಡುವುದು ವಾಣಿ ವಿಲಾಸ ನೀರು ಸರಬರಾಜು ಕೇಂದ್ರ ಸಮಸ್ಯೆಯಾಗುತ್ತಿದೆ.

ನಾಲ್ಕು ಕಡೆಯಿಂದ ನೀರು ಸರಬರಾಜು

ಮೈಸೂರು ನಗರಕ್ಕೆ ಕಬಿನಿ ಮತ್ತು ಕೆಆರ್‌ಎಸ್ ಹತ್ತಿರದಲ್ಲಿದ್ದರೂ ಇಲ್ಲಿಂದ ನಗರದ ಎಲ್ಲ ಬಡಾವಣೆಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದರ ಜತೆಗೆ ಬೋರ್ ವೆಲ್ ನೀರನ್ನೂ ಅವಲಂಭಿಸಬೇಕಾಗಿದೆ. ಸದ್ಯಕ್ಕೆ ನಗರಕ್ಕೆ ನಾಲ್ಕು ಕಡೆಯಿಂದ ನೀರು ಸರಬರಾಜು ಮಾಡುತ್ತಿದ್ದರೂ ಬೇಡಿಕೆ ಪೂರೈಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಬೆಂಗಳೂರು ಜಲಮಂಡಳಿ ಮಾದರಿಯಲ್ಲಿ ಮೈಸೂರಿನಲ್ಲಿಯೂ ಪ್ರತ್ಯೇಕ ಜಲಮಂಡಳಿ ರಚಿಸಬೇಕು, ಇಲ್ಲವೇ ವಾಣಿ ವಿಲಾಸ ನೀರು ಸರಬರಾಜು ಕೇಂದ್ರವನ್ನು ಪ್ರತ್ಯೇಕಗೊಳಿಸಿ ಸ್ವಾಯತ್ತೆ ನೀಡಬೇಕು ಎನ್ನುವ ಒತ್ತಾಯವೂ ಕೇಳಿ ಬಂದಿದೆ.

ನೀರು ಪೂರೈಕೆಯಲ್ಲಿ ಭಾರಿ ವ್ಯತ್ಯಯ, ಸೋರಿಕೆ, ಅನಧಿಕೃತ ಸಂಪರ್ಕ, ರಾಜಕೀಯ ಹಸ್ತಕ್ಷೇಪ, ಕೋಟಿಗಟ್ಟಲೇ ನೀರಿನ ಶುಲ್ಕ ಬಾಕಿ ಸೇರಿದಂತೆ ಹಲವು ಸಮಸ್ಯೆಗಳು ಮೈಸೂರಿನ ವಾಣಿ ವಿಲಾಸ ನೀರು ಸರಬರಾಜು ಕೇಂದ್ರವನ್ನು ಸಂಕಷ್ಟಕ್ಕೆ ತಳ್ಳಿದೆ. ನಗರಪಾಲಿಕೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಣಿ ವಿಲಾಸ ನೀರು ಸರಬರಾಜು ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ನೀರು ಪೂರೈಕೆ ಮಾಡುತ್ತಿದೆ. ನಗರದ ಸುತ್ತಲಿನ ಮುಡಾ ಅಥವಾ ಖಾಸಗಿ ಬಡಾವಣೆಗಳು ಸೇರಿದಂತೆ ಗ್ರಾಮ ಪಂಚಾಯಿತಿಗಳಿಗೆ ನೀರು ಪೂರೈಕೆ ಮಾಡುತ್ತಿಲ್ಲ.

Drought Is Drinking Water Problem Going To Hit Mysuru City To

ಬೋರ್ ವೆಲ್ ನೀರು ಬಳಕೆ ಅನಿವಾರ್ಯ

ಇನ್ನು ಹೊಸದಾಗಿ ಆರಂಭವಾಗಿರುವ ಕೆಲವು ಬಡಾವಣೆಗಳು ಬೋರ್ ವೆಲ್ ನೀರನ್ನು ಬಳಸುತ್ತಿದ್ದರೆ, ಕೆಲವು ಬಡಾವಣೆಗಳು ಸ್ಥಳೀಯ ಸಂಸ್ಥೆಗಳಿಂದ ನೀರನ್ನು ಬಳಕೆ ಮಾಡಿಕೊಳ್ಳುತ್ತಿವೆ. ನಗರಕ್ಕೆ ಹೊಂದಿಕೊಂಡಂತೆ ಇರುವ ನಗರಸಭೆ ಮತ್ತು ಗ್ರಾಮಪಂಚಾಯಿತಿಗಳಿಗೆ ಕೆಲವು ಕಡೆ ಕಬಿನಿ ಮತ್ತು ಕಾವೇರಿ ನೀರು ಪೂರೈಕೆಯಾಗುತ್ತಿದೆಯಾದರೂ ಬಹಳಷ್ಟು ಕಡೆಗಳಲ್ಲಿ ಬೋರ್ ವೆಲ್ ನೀರನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರು ನಗರಕ್ಕೊಂದು ಸುತ್ತು ಬಂದರೆ ಕೆಲವು ಕಡೆ ನೀರು ಯಥೇಚ್ಛವಾಗಿ ಸರಬರಾಜಾಗುತ್ತಿದ್ದರೆ ಕೆಲವೆಡೆ ಸಮಸ್ಯೆಗಳು ಕಂಡು ಬರುತ್ತಿದೆ.

ಕಳೆದ ಐದು ವರ್ಷಗಳ ಕಾಲ ಉತ್ತಮವಾಗಿ ಮಳೆಯಾಗುತ್ತಿದ್ದ ಕಾರಣ ನೀರಿಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಕಾರಣದಿಂದ ಸಮಸ್ಯೆ ಎದುರಾಗಿದೆ. ದಿನಕಳೆದಂತೆ ಮಳೆ ಸಮರ್ಪಕವಾಗಿ ಬಾರದೆ ಹೋದರೆ ಸಮಸ್ಯೆ ಉಲ್ಭಣವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ಮಹಾ ನಗರಪಾಲಿಕೆ ಆಯುಕ್ತೆ ಡಾ.ಎನ್.ಎನ್.ಮಧು ಅವರು ಮೈಸೂರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಸಧ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಬೇಸಿಗೆ ಆಗಿರುವುದರಿಂದ ತೊಂದರೆ ಆಗುವ ಕಡೆ ನೀರು ಪೂರೈಸಲು 40 ಟ್ಯಾಂಕರ್ಗಳನ್ನು ನಿಯೋಜಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೈಸೂರಿಗೆ ಸರಬರಾಜಾಗುವ ನೀರಿನ ಪ್ರಮಾಣವೆಷ್ಟು?

ಇನ್ನು ಮೈಸೂರು ನಗರಕ್ಕೆ ಬೇಕಾಗುವ ನೀರಿನ ಪ್ರಮಾಣದ ಬಗ್ಗೆ ನೋಡುವುದಾದರೆ, ಅಂದಾಜು 13.50 ಲಕ್ಷ ಜನಸಂಖ್ಯೆ ಇರುವ ಮೈಸೂರು ನಗರಕ್ಕೆ ನಿತ್ಯ 230 ಎಂಎಲ್ ಡಿ ನೀರಿನ ಅವಶ್ಯಕತೆ ಇದೆ. ಜತೆಗೆ ಕೈಗಾರಿಕೆಗಳು, ಮೈಸೂರು ತಾಲೂಕಿನ ಗ್ರಾಮಗಳಿಗೂ ನೀರು ಸರಬರಾಜು ಮಾಡಲಾಗುತ್ತಿದ್ದು, ಅಂದಾಜು 100ಎಂಎಲ್ಡಿವರೆವಿಗೂ ನೀರು ಬೇಕಿದೆ. ಈಗ ಕಬಿನಿಯಿಂದ 60 ಎಂಎಲ್‌ಡಿ, ಹೊಂಗಳ್ಳಿಯಿಂದ 100, ಮೇಳಾಪುರದಿಂದ 100, ಬೆಳಗೊಳದಿಂದ 45 ಎಂಎಲ್ಡಿ ನೀರು ಪೂರೈಕೆ ಆಗುತ್ತಿದೆ. ನಗರದ ವಿವಿಧೆಡೆ ಇರುವ ಬೋರ್ವೆಲ್ ನೀರಿನಿಂದ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

Drought Is Drinking Water Problem Going To Hit Mysuru City To

ಇದೆಲ್ಲದರ ನಡುವೆಯೂ ವಾಣಿ ವಿಲಾಸದಿಂದ ನಿರಂತರವಾಗಿ ನೀರು ಪೂರೈಕೆಯಾಗುತ್ತಿದ್ದರೂ, ಸಾವಿರಾರು ಮಂದಿ ಗೃಹ ಬಳಕೆದಾರರು ನೀರಿನ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದು, ಬಡ್ಡಿ ಬೆಟ್ಟದಂತೆ ಬೆಳೆಯುತ್ತಿದೆ. ನೀರಿನ ಬಾಕಿ ಸುಮಾರು ನೂರು ಕೋಟಿಯಷ್ಟಿದೆ. ಇದನ್ನು ವಸೂಲಿ ಮಾಡುವುದೇ ವಾಣಿ ವಿಲಾಸದ ಅಧಿಕಾರಿಗಳಿಗೆ ಸವಾಲ್ ಆಗಿದೆ. ಇದರ ವಸೂಲಿಗೆ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲವೊಮ್ಮೆ ನಿರ್ಲಕ್ಷ್ಯ ತಾಳಿದರೆ, ಮತ್ತೆ ಕೆಲವು ಕಡೆ ರಾಜಕೀಯ ಒತ್ತಡದಿಂದ ಬಾಕಿ ವಸೂಲಿ ಮಾಡಲು ಸಾಧ್ಯವಾಗದೆ ವಾಪಸ್ ಬರುವಂತಾಗಿರುವುದು ಸಮಸ್ಯೆಯಾಗಿದೆ.

ಅಧಿಕಾರಿಗಳಿಗೆ ನೀರಿನ ಬಿಲ್ ವಸೂಲಿ ಸಮಸ್ಯೆ

ಇನ್ನು ಪ್ರತಿ ತಿಂಗಳು ವಿದ್ಯುತ್ ಬಿಲ್ ವಸೂಲಿ ಮಾದರಿಯಲ್ಲಿ ನೀರಿನ ಶುಲ್ಕ ವಸೂಲಿಗೆ ಕಠಿಣ ಕ್ರಮ ವಹಿಸಬೇಕಿದೆ. ರಾಜಕಾರಣಿಗಳ ಹಿಡಿತದಲ್ಲಿರುವ ವಾಣಿಜ್ಯ ಮಳಿಗೆ, ಅಪಾರ್ಟ್ ಮೆಂಟ್, ಹೋಟೆಲ್ ಸೇರಿದಂತೆ ಇನ್ನಿತರ ಉದ್ಯಮಗಳಿಗೆ ಅನಧಿಕೃತ ಸಂಪರ್ಕ ಪಡೆಯಲಾಗುತ್ತಿದೆ. ಇವುಗಳಿಗೆ ಮೀಟರ್, ಬಿಲ್ ಏನು ಇರುವುದಿಲ್ಲ. ಇಂತಹ ಅನಧಿಕೃತ ಸಂಪರ್ಕಕ್ಕೆ ಕಡಿವಾಣ ಬೀಳಬೇಕಿದೆ ಹೀಗಾದರೆ ಅನಧಿಕೃತ ಬಳಕೆಯೊಂದಿಗೆ ಪೋಲಾಗುವ ನೀರನ್ನು ತಡೆಯ ಬಹುದಾಗಿದೆ. ಜತೆಗೆ ನಗರದಲ್ಲಿ ನೀರಿನ ಜಾಗೃತಿ ಮಾಡುವ ಕೆಲಸವೂ ಆಗಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+