ಮತದಾನದ ದಿನ ಟ್ರಿಪ್ ಹೋಗುತ್ತಿದ್ದೀರಾ?, ಅದಕ್ಕೂ ಮುನ್ನ ಈ ಸುದ್ದಿ ಓದಿ..
ಮೈಸೂರು, ಏಪ್ರಿಲ್ 4: ಮತದಾನ ಮಾಡುವ ವೇಳೆ ಸಾಲು -ಸಾಲು ರಜೆ ಇದೆ, ಯಾರು ಬಿಡ್ತಾರೆ ಗುರು, ನಡಿ ಎಲ್ಲಾದ್ರೂ ಟ್ರಿಪ್ ಹಾಕೋಣ ಎಂಬ ಪ್ಲಾನ್ ನಲ್ಲಿದ್ರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ..
ಅಂದು ನಿಮಗೆ ಟ್ರಿಪ್ ಮಾಡೋಕೆ ಬೇಕಾಗುವ ವಾಹನಗಳು ಸಿಗೋದು ಡೌಟು. ಯಾಕೆಂದರೆ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ವತಿಯಿಂದ ಕಡ್ಡಾಯ ಮತದಾನದ ಅಂಗವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮತದಾನ ಕಡಿಮೆಯಾಗುತ್ತಿದೆ. ಚುನಾವಣೆ ದಿನ ರಜಾ ಇರೋದ್ರಿಂದ ಬಹಳಷ್ಟು ಜನ ಮತ ಚಲಾಯಿಸದೇ ಪ್ರವಾಸಕ್ಕೆ ತೆರಳುತ್ತಾರೆ. ಅದಕ್ಕಾಗಿ ಮತದಾನ ದಿನದಂದು ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ನ ಸದಸ್ಯರ ತೀರ್ಮಾನದಂತೆ ವಾಹನ ಸೇವೆ ಸ್ಥಗಿತಗೊಳಿಸಲಾಗುವುದು. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ದಿನದಿಂದ ಸಾಲು ಸಾಲು ರಜೆಗಳಿದ್ದು, ಮತದಾನ ದಿನದಂದು ವಾಹನ ಸೇವೆ ಸ್ಥಗಿತಗೊಳಿಸುವ ತೀರ್ಮಾನ ಕೈಗೊಂಡಿದ್ದೇವೆ ಎಂದರು.

ಕಡ್ಡಾಯ ಮತದಾನಕ್ಕಾಗಿ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ನಿಂದ ಈ ಅಭಿಯಾನ ಕೈಗೊಳ್ಳಲಾಗಿದ್ದು, ಮತದಾನ ಮಾಡಲು ತೆರಳುವ ಗ್ರಾಹಕರಿಗೆ ವಾಹನದ ವ್ಯವಸ್ಥೆ ಇರುತ್ತದೆ. ಮತದಾರರು ಮತ ಚಲಾಯಿಸಿ ಬಂದ ನಂತರ ಪ್ರವಾಸಕ್ಕೆ ತೆರಳುತ್ತೇವೆ ಎಂದರೆ ಮಾತ್ರ ಅವರಿಗೆ ವಾಹನದ ಅವಕಾಶ ಮಾಡಿಕೊಡುತ್ತೇವೆ. ಮತದಾನ ಮಾಡಿರುವುದನ್ನು ಖಚಿತಪಡಿಸಿಕೊಂಡ ನಂತರ ಗುಲಾಬಿ ಕೊಟ್ಟು ಪ್ರವಾಸಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದರು.
ನಮ್ಮ ಅಭಿಯಾನ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬುದು. ಯಾವುದೇ ಸದಸ್ಯರು, ಯಾವುದೇ ಪಕ್ಷದ ಪರವಾಗಿ ಅಥವಾ ಅಭ್ಯರ್ಥಿ ಪರವಾಗಿ ಮತದಾನ ಮಾಡಿ ಎಂದು ಹೇಳುತ್ತಿಲ್ಲ. ನಿಮ್ಮ ಮತ, ನಿಮ್ಮ ಹಕ್ಕು. ಪ್ರಜಾಪ್ರಭುತ್ವದಲ್ಲಿ ಮತದಾನವೇ ಮುಖ್ಯ. ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.












Click it and Unblock the Notifications