ಕುಗ್ಗುತ್ತಿದೆ ಕ್ಯಾಲೆಂಡರ್ ಗಳ ಬೇಡಿಕೆ, ಕಾರಣ ಏನು ?
ಮೈಸೂರು, ಡಿಸೆಂಬರ್ 24 : ಡಿಸೆಂಬರ್ ತಿಂಗಳು ಬಂತೆಂದರೆ ಸಾಕು ಮಾರುಕಟ್ಟೆಗೆ ಕ್ಯಾಲೆಂಡರ್ ಗಳು ಲಗ್ಗೆ ಇಡುತ್ತಿದ್ದವು. ಸಾಮಾನ್ಯವಾಗಿ ಎಲ್ಲಾ ಅಂಗಡಿಗಳ ಮುಂದೆಯೂ ಆಕರ್ಷಕವಾದ, ವಿವಿಧ ಕ್ಯಾಲೆಂಡರ್ ಗಳು ಗ್ರಾಹಕರನ್ನುಕೈಬೀಸಿ ಕರೆಯುತ್ತಿದ್ದವು.
ಈಗ ತಂತ್ರಜ್ಞಾನದ ಪೈಪೋಟಿಯಿಂದಾಗಿ ಎಲ್ಲರೂ ಮುಂದಿನ ನೂರಾರು ವರ್ಷಗಳ ದಿನಾಂಕ, ವಾರ, ಸಮಯ, ಗಂಟೆ, ವಿಶೇಷ ದಿನಗಳ ಮಾಹಿತಿಗಳನ್ನು ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಿರುವುದರಿಂದ ಕ್ಯಾಲೆಂಡರ್ ಉದ್ಯಮ ಬೇಡಿಕೆ ಕಳೆದುಕೊಳ್ಳುತ್ತಿದೆ.
ಅದರ ನಡುವೆಯೂ ಮೈಸೂರಿನ ಶಿವರಾಂ ಪೇಟೆಯ ಕೆಲವು ಗಲ್ಲಿಗಳಲ್ಲಿ ಪ್ರಿಂಟಿಂಗ್ ಪ್ರೆಸ್ ಗಳು ಹೆಚ್ಚಾಗಿದ್ದು ಅಲ್ಲಿ ಈಗ ಕ್ಯಾಲೆಂಡರ್ ಮುದ್ರಣದ ಸದ್ದು ಕೇಳಿಬರುತ್ತಿದೆ. ಸಾಮಾನ್ಯವಾಗಿ ಡಿಸೆಂಬರ್ ಅಂತ್ಯದಲ್ಲಿ, ಜನವರಿ ಮೊದಲೆರೆಡು ವಾರಗಳಲ್ಲಿ ಕ್ಯಾಲೆಂಡರ್ ಗಳ ವ್ಯಾಪಾರ ಬಿರುಸಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಕ್ಯಾಲೆಂಡರ್ ಕೊಳ್ಳುವವರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. "ಮೊದಲೆಲ್ಲ ಕೆಲವು ಕಾರ್ಪೊರೇಟ್ ಕಂಪೆನಿಗಳು ಪ್ರಚಾರದ ಉದ್ದೇಶದಿಂದ ಉಚಿತವಾಗಿ ಕ್ಯಾಲೆಂಡರ್ ಗಳನ್ನು ಹಂಚಲು ಆರಂಭಿಸಿದವು. ನಂತರ ಬ್ಯಾಂಕ್ ಗಳೂ ತಮ್ಮ ಗ್ರಾಹಕರಿಗೆ ಉಚಿತವಾಗಿ ಕ್ಯಾಲೆಂಡರ್ ನೀಡುತ್ತಿದ್ದವು.
ಸಹಕಾರಿ ಸಂಘಗಳು, ವಿವಿಧ ಸಂಘ ಸಂಸ್ಥೆಗಳು, ಎಲ್ಐಸಿ ಏಜೆಂಟರ್ ಗಳು, ಖಾಸಗಿ ಕಂಪೆನಿಗಳು ಕ್ಯಾಲೆಂಡರ್ ಮುದ್ರಣ ಮಾಡಿಸಿ ಗ್ರಾಹಕರಿಗೆ ಹಂಚುತ್ತಿದ್ದವು" ಎನ್ನುತ್ತಾರೆ ಮೈಸೂರಿನ ಕ್ಯಾಲೆಂಡರ್ ಮುದ್ರಕರೊಬ್ಬರು.

ಆಸಕ್ತಿ ತೋರಿಸುತ್ತಿಲ್ಲ
"ವೈಟ್ ಪೇಪರ್, ಹಾರ್ಡ್ ಪೇಪರ್, ಸಿಂಗಲ್ ಶೀಟ್, ಟೇಬಲ್ ಕ್ಯಾಲೆಂಡರ್ ಗಳು ಸೇರಿದಂತೆ ವಿವಿಧ ರೀತಿಯ ಕ್ಯಾಲೆಂಡರ್ ಗಳನ್ನು ಆಕರ್ಷಕವಾಗಿ ಮುದ್ರಣ ಮಾಡಲಾಗುತ್ತದೆ.
ಈ ವರ್ಷ ಕ್ಯಾಲೆಂಡರ್ ಮಾಡಿಸಲು ಜನ ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. ವಿಧಾನಸಭೆ ಚುನಾವಣೆ ಬರುತ್ತಿರುವುದರಿಂದ, ಪ್ರಚಾರಕ್ಕಾಗಿ ಫೆಬ್ರುವರಿ ಮಾರ್ಚ್ ತಿಂಗಳಲ್ಲಿ ಕ್ಯಾಲೆಂಡರ್ ಮಾಡಿಸಿ ಹಂಚುವವರು ಇದ್ದಾರೆ. ಆದ್ದರಿಂದ ಆಗ ಕ್ಯಾಲೆಂಡರ್ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಬಹು ಎನ್ನುವ ನಿರೀಕ್ಷೆಯಲ್ಲಿ ಇದ್ದೇ ಇದೆ" ಎನ್ನುತ್ತಾರೆ ಅಗ್ರಹಾರದ ರಾಮಾನುಜ ರಸ್ತೆಯಲ್ಲಿರುವ ತಾರಾ ಪ್ರಿಂಟ್ಸ್ ಮಾಲೀಕ ಎಂ.ಎನ್.ಶಶಿಕುಮಾರ್.
ಜಿಎಸ್ಟಿ ಹೊಡೆತ
"30 ವರ್ಷಗಳಿಂದ ಕ್ಯಾಲೆಂಡರ್ ಮುದ್ರಣ ಮಾಡುತ್ತಿದ್ದೇವೆ. ಪ್ರತಿ ವರ್ಷ 2 ಲಕ್ಷ ಕ್ಯಾಲೆಂಡರ್ ಗಳನ್ನು ಮುದ್ರಿಸುತ್ತೇವೆ. ಒಮ್ಮೆಲೆ ಉಂಡೆ ಪೇಪರ್ ತರಿಸುತ್ತೇವೆ. ಇತ್ತೀಚೆಗೆ ವರ್ಷದಿಂದ ವರ್ಷಕ್ಕೆ ಪೇಪರ್ ಗಳ, ಬಣ್ಣಗಳ ಬೆಲೆ ಹೆಚ್ಚಾಗಿದೆ. ಅದರ ಜೊತೆಗೆ ಈ ವರ್ಷ ಜಿಎಸ್ಟಿ ಹೊಡೆತ ಬಿದ್ದಿದೆ. ಎಲ್ಲ ವೆಚ್ಚಗಳನ್ನು ಕಳೆದು ಒಂದು ಕ್ಯಾಲೆಂಡರ್ ನಲ್ಲಿ ಕೇವಲ 1 ರೂ ಮಾತ್ರ ಲಾಭ ಉಳಿಯುತ್ತದೆ". ಎನ್ನುತ್ತಾರೆ ಶಶಿಕುಮಾರ್.

ಕೈ ಬಿಟ್ಟ ವಿನ್ಯಾಸಗಳಿವು
"ಕಾರ್ಟೂನ್, ಪ್ರಾಣಿ, ಪಕ್ಷಿಗಳ ಚಿತ್ರಗಳಿರುವ ಕ್ಯಾಲೆಂಡರ್ ಗಳನ್ನು ಮಕ್ಕಳು ಇಷ್ಟ ಪಡುತ್ತಿದ್ದರು. ಜತೆಗೆ, ರೂಪದರ್ಶಿಗಳಿರುವ, ಸಿನಿಮಾ ನಟ, ನಟಿಯರು ಇರುವ ಕ್ಯಾಲೆಂಡರ್ ಗಳಿಗೆ ಕೆಲ ವರ್ಷಗಳ ಹಿಂದೆ ಭಾರೀ ಬೇಡಿಕೆ ಇತ್ತು. ಆದರೆ, ಈಗ ಅವುಗಳನ್ನು ಯಾರೂ ಕೇಳುತ್ತಿಲ್ಲವಾದ್ದರಿಂದ ಆ ವಿನ್ಯಾಸಗಳನ್ನೇ ಕೈ ಬಿಟ್ಟಿದ್ದೇವೆ" ಎನ್ನುತ್ತಾರೆ ಡಿಸೈನರ್ ಸಂದೇಶ್.

ಮುದ್ರಿಸಲು ಆರ್ಡರ್
"ದೇವರ ಚಿತ್ರವಿರುವ ಸಿಂಗಲ್ ಶೀಟ್ ಕ್ಯಾಲೆಂಡರ್ ಗಳಿಗೆ ಹಿಂದೆ ಭಾರೀ ಬೇಡಿಕೆ ಇತ್ತು. ಇತ್ತೀಚಿನ ದಿನಗಳಲ್ಲಿ ಕೆಲವರು ಮುದ್ರಿಸಲು ಆರ್ಡರ್ ಕೊಡುತ್ತಿದ್ದಾರೆ. ಅವುಗಳನ್ನು ಉಚಿತವಾಗಿ ಹಂಚುತ್ತಾರೆ. ಜತೆಗೆ, ವನ್ಯಜೀವಿಗಳ, ಪರಿಸರದ ಚಿತ್ರಗಳಿರುವ ಕ್ಯಾಲೆಂಡರ್ ಗಳನ್ನು ಕೆಲವು ಸಂಸ್ಥೆಗಳು ಮಾಡಿಸುತ್ತಿವೆ. ಅನೇಕ ಕಾರ್ಪೊರೇಟ್ ಕಂಪೆನಿಗಳು, ಸ್ಥಳೀಯ ಕಂಪೆನಿಗಳು ಆ ಸಂಸ್ಥೆಯ ವಿವರ, ಚಿತ್ರವಿರುವಂಥ ಕ್ಯಾಲೆಂಡರ್ ಗಳನ್ನು ಮಾಡಿಸುತ್ತಿದ್ದಾರೆ" ಎನ್ನುತ್ತಾರೆ ಪ್ರಿಂಟಿಂಗ್ ಪ್ರೆಸ್ ಮಾಲೀಕ ಲೋಕೇಶ್.
ತಂತ್ರಜ್ಞಾನದ ಯುಗದಲ್ಲಿ ಕ್ಯಾಲೆಂಡರ್ ಉದ್ಯಮ ತೆರೆಮರೆಗೆ ಸರಿಯುತ್ತಿರುವುದು ಮಾತ್ರ ಖೇದಕರ.












Click it and Unblock the Notifications