• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ 2022: ದಸರಾ ಬೆಳಕಿನ ವೈಭವಕ್ಕೆ ಚಾಲನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್‌, 26: ಮೈಸೂರಿನಲ್ಲಿ ದಸರಾದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರವನ್ನು ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.

ಇಂಧನ ಸಚಿವರಾದ ಸುನೀಲ್ ಕುಮಾರ್, ಶಾಸಕರಾದ ನಾಗೇಂದ್ರ, ಜಿಲ್ಲಾಕಾರಿ ಡಾ. ಬಗಾದಿ ಗೌತಮ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಕೈ ಜೋಡಿಸಿದರು. ನಗರದ ಎಲ್ಲಾ ರಸ್ತೆಗಳು, ಪಾರಂಪರಿಕ ಕಟ್ಟಡಗಳು, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಕಾಣುತ್ತಿದೆ. ಹಿಂದಿನ ರಾಜ ವೈಭವ ಮತ್ತೆ ಮರುಕಳಿಸಿದಂತೆ ಭಾಸವಾಗುತ್ತದೆ. ಈ ದೃಶ್ಯ ಒಂದು ಕ್ಷಣ ಮೈಮನ ಪುಳಕಿತವಾಗುವಂತೆ ಮಾಡುತ್ತಿದೆ.

ಮೈಸೂರಿನಲ್ಲಿ ಎಲ್ಲೆಡೆ ಬೆಳಕಿನ ವೈಭವ
ಸಂಜೆ ಆಗುತ್ತಿದ್ದಂತೆ ಮನೆಯಿಂದ ಹೊರಗೆ ಬರುತ್ತಿರುವ ಜನರು ಎಲ್ಲೆಡೆ ಸುತ್ತಾಡಿ ವಿದ್ಯುತ್ ದೀಪಾಲಂಕಾರದ ವೈಭವವನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಯುವಜನರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಾಗುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡು ದಸರೆಯ ಸೊಬಗನ್ನು ಸೆರೆ ಹಿಡಿಯುತ್ತಿದ್ದಾರೆ. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಪ್ರಮುಖ ರಸ್ತೆಗಳು, ಝಗಮಗಿಸುವ ಅರಮನೆಯ ಮಹಲುಗಳು, ಮಂದ ಬೆಳಕಿನಲ್ಲಿ ಮಂದಸ್ಮಿತವಾಗಿ ಕಾಣುವ ಗುರುಮನೆಗಳು, ಹಸಿರು ದೀಪಾಲಂಕಾರ ಹೊತ್ತ ಉದ್ಯಾನವನಗಳು, ಕಪ್ಪು ಬಣ್ಣದ ಭಿತ್ತಿಪತ್ರಗಳ ಮೇಲೆ ಬಣ್ಣಬಣ್ಣದ ಬೆಳಕಿನ ಚಿತ್ತಾರಗಳು ನವರಾತ್ರಿಯ ರಂಗನ್ನು ಹೆಚ್ಚಿಸಿದೆ.

ಅಲ್ಲದೆ ಅಂಬಾವಿಲಾಸ ಅರಮನೆ, ಲಲಿತ ಮಹಲ್ ಅರಮನೆ, ದೇವರಾಜ ಅರಸು ರಸ್ತೆ, ಮೂಡಾ ರಸ್ತೆ, ಎಲ್‌ಐಸಿ ವೃತ್ತ, ರಾಮ ಸ್ವಾಮಿ ವೃತ್ತ, ರೈಲ್ವೇ ಸ್ಟೇಷನ್ ವೃತ್ತ, ಪಾರಂಪರಿಕ ಕಟ್ಟಡಗಳಾದ ಪುರಭವನ, ನಗರ ಪಾಲಿಕೆ ಕಟ್ಟಡ, ಮೂಡಾ, ನ್ಯಾಯಾಲಯ ಕಟ್ಟಡ, ಜಿಲ್ಲಾಕಾರಿ ಕಚೇರಿ, ಮೈಸೂರು ವಿಶ್ವ ವಿದ್ಯಾಲಯ ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳು ಬೆಳಕಿನಿಂದ ಕಂಗೊಳಿಸಿದವು. ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ರಾಷ್ಟ್ರ ನಾಯಕರು, ವಿವೇಕಾನಂದ, ಬಸವಣ್ಣ ಸೇರಿದಂತೆ ಸಮಾಜ ಸುಧಾರಕರ ನಾನಾ ರೀತಿ ಕಲಾಕೃತಿಗಳಿದ್ದು, ನಗರದೆಲ್ಲೆಡೆ ಈ ಮಹನೀಯರ ಸಂದೇಶ ಸಾರುತ್ತಿವೆ. ದಸರಾ ದೀಪಾಲಂಕಾರ ಉಪಸಮಿತಿ ಈ ಬಾರಿ 96 ವೃತ್ತಗಳು ಸೇರಿದಂತೆ ಸುಮಾರು 124 ಕಿಲೋ ಮೀಟರ್‌ ದೀಪಾಲಂಕಾರ ಜಗಮಗಿಸುತ್ತಿದೆ.

ದೀಪಾಲಂಕಾರದ ಸಿದ್ದತೆ ಕುರಿತು ಪರಿಶೀಲನೆ
ಮೈಸೂರು ದಸರಾ ದೀಪಾಲಂಕಾರವನ್ನು ನಿನ್ನೆ ರಾತ್ರಿ 11:30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಿಟಿ ರೌಂಡ್ಸ್ ನಡೆಸಿ ಪರಿಶೀಲನೆ ನಡೆಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಗಣ್ಯರೊಂದಿಗೆ ನಿನ್ನೆ ರಾತ್ರಿ ವಿದ್ಯಾಪೀಠ ಸರ್ಕಲ್‌ನಿಂದ ಸಿಟಿ ರೌಂಡ್ಸ್ ನಡೆಸಿದ್ದರು. ರ‍್ಯಾ ಡಿಸನ್ ಬ್ಲೂ ಹೋಟೆಲ್‌ನಿಂದ ಕೆ.ಎಸ್.ಆರ್.ಟಿ.ಸಿ.ಯ ಎರಡು ವೋಲ್ವೊ ಬಸ್ ಮೂಲಕ ವಿದ್ಯಾಪೀಠ ಸರ್ಕಲ್‌ಗೆ ಆಗಮಿಸಿದ ಗಣ್ಯರು ಅಲ್ಲಿಂದ ಪ್ರವಾಸೋದ್ಯಮ ನಿಗಮದ ಅಂಬಾರಿ ಓಪನ್‌ ಏರ್ ಬಸ್ ಮೂಲಕ ಸಿ.ಟಿ. ರೌಂಡ್ಸ್ ನಡೆಸಿದ್ದರು.

Mysuru Dasara 2022: Grand Illumination Inauguration

ಅಂಬಾರಿ ಬಸ್ ವಿದ್ಯಾ ಪೀಠ ಸರ್ಕಲ್‌ನಿಂದ ಹಾರ್ಡಿಂಗ್ ಸರ್ಕಲ್, ಜಯಚಾಮರಾಜೇಂದ್ರ ಒಡೆಯರ್ ಸರ್ಕಲ್, ಕೆ.ಆರ್. ಸರ್ಕಲ್, ಸಯ್ಯಾಜಿ ರಾವ್ ರಸ್ತೆ ಮೂಲಕ ಹೈವೇ ಸರ್ಕಲ್‌ವರೆಗೆ ಸಾಗಿ ಹಿಂದಿರುಗಿದ್ದರು. ಬಳಿಕ ಆಯುರ್ವೇದಿಕ್ ಆಸ್ಪತ್ರೆಯಿಂದ ಬಲಕ್ಕೆ ತಿರುಗಿ, ರೈಲ್ವೇ ನಿಲ್ದಾಣ, ಮೆಟ್ರೊಪೋಲೊ ಸರ್ಕಲ್, ಹುಣಸೂರು ರಸ್ತೆ ಕಡೆಗೆ ತಿರುಗಿ ಸ್ಕೌಟ್ಸ್ ಅಂಡ್ ಗೈಡ್ಸ್ ಶಾಲೆ ಮೂಲಕ ಚಾಮರಾಜ ಜೋಡಿ ರಸ್ತೆಯನ್ನು ಹಾದು ವಿದ್ಯಾಪೀಠ ಸರ್ಕಲ್ ತಲುಪಿದರು. ಈ ಬಾರಿ ಅದ್ಧೂರಿ ಹಾಗೂ ಸಾಂಪ್ರದಾಯಿಕ ದಸರಾದ ಹಿನ್ನೆಲೆಯಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ನಗರದ ಸುತ್ತಮುತ್ತಲು ಸುಮಾರು 124 ಕಿಲೋ ಮೀಟರ್‌ ಸುತ್ತ, 96 ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ ಕಂಗೊಳಿಸುತ್ತಿದೆ. ಹಾಗೂ ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಸೇರಿದಂತೆ 28 ವಿವಿಧ ಬಗೆಯ ಪ್ರತಿಕೃತಿಗಳನ್ನು ದಸರಾ ದೀಪಾಲಂಕರದಲ್ಲಿ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷದಂತೆ ರಾತ್ರಿ 7 ಗಂಟೆಯಿಂದ 10.30ರ ವರೆಗೆ ದೀಪಾಲಂಕಾರ ವೀಕ್ಷಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

English summary
Minister ST Somashekhar inaugurated light splendor, which is one of the main attractions in Mysuru Dasara. Know more, :
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X