ಶಿಕ್ಷಣ ಸಚಿವರ ಜಿಲ್ಲೆಯಲ್ಲಿಯೇ ಮುಚ್ಚಲಿವೆ 91 ಶಾಲೆಗಳು!
ಚಾಮರಾಜನಗರ, ಜೂನ್.13 : ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಬೀಗ ಹಾಕುವ ನೂತನ ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ್ದೇ ಆದರೆ ಸಚಿವರ ತವರು ಜಿಲ್ಲೆ ಚಾಮರಾಜನಗರದಲ್ಲಿ 91 ಶಾಲೆಗಳು ಇತಿಹಾಸದ ಪುಟಗಳನ್ನು ಸೇರಲಿವೆ.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರಕಾರ ಜಿಲ್ಲೆಯ 91 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಇಲ್ಲಿ 1ರಿಂದ 7ನೇ ತರಗತಿಯವರೆಗೆ ವಿದ್ಯಾರ್ಥಿಗಳಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕಾಗಿ ಒಬ್ಬ ಶಿಕ್ಷಕರು ಮಾತ್ರ ಪಾಠ ಪ್ರವಚನ ಮಾಡುತ್ತಿದ್ದಾರೆ.
ಸಚಿವರ ಮಹೇಶ್ ಅವರ ಸ್ವಕ್ಷೇತ್ರ ಕೊಳ್ಳೇಗಾಲದಲ್ಲಿ 8 ಏಕೋಪಾಧ್ಯಾಯ ಶಾಲೆಗಳಿವೆ. ಉಳಿದಂತೆ ಚಾಮರಾಜನಗರ ತಾಲೂಕು (19), ಗುಂಡ್ಲುಪೇಟೆ (35), ಹನೂರು (25) ಹಾಗೂ ಯಳಂದೂರುಗಳಲ್ಲಿ ಇಂತಹ 4 ಶಾಲೆಗಳಿವೆ.

ಏಕೋಪಾಧ್ಯಾಯ ಶಾಲೆಗಳಿಗೆ ಬೀಗ ಹಾಕುವ ಮೂಲಕ ಸುಮಾರು 30,000 ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗಳಿಗೆ ಸೇರ್ಪಡೆಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಇದು ಸಮಾಜದ ಕೆಲ ವರ್ಗಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಸರ್ಕಾರದ ನಡೆ ಕುತೂಹಲ ಕೆರಳಿಸಿದೆ.











Click it and Unblock the Notifications