ಮೈಸೂರು ಮೃಗಾಲಯದ ಪೊಲೋ ಇನ್ನಿಲ್ಲ
ಮೈಸೂರು, ಏ. 27 : ಪ್ರವಾಸಿಗರು ಮಾಡಿದಂತೆ ತಾನು ಮಾಡುತ್ತಾ ಮೈಸೂರು ಮೃಗಾಲಯದಲ್ಲಿ ಜನರ ಮನರಂಜಿಸುತ್ತಿದ್ದ ಗೊರಿಲ್ಲಾ ಪೋಲೋ ಭಾನುವಾರ ಮುಂಜಾನೆ ಮೃತಪಟ್ಟಿದೆ. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪೋಲೋ ಕೇವಲ ನೀರಿನಂಶವಿರುವ ಹಣ್ಣುಗಳನ್ನು ಮಾತ್ರ ಸೇವಿಸುತ್ತಿತ್ತು.
ಜರ್ಮನಿಯಲ್ಲಿ ಜನಿಸಿದ್ದ ಪೋಲೋ 1995ರಿಂದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ನೆಲೆಸಿತ್ತು. ಒಂದು ತಿಂಗಳ ಹಿಂದೆ ಪೋಲೋ ಕೆಳ ತುಟಿಯ ಬಲಭಾಗದಲ್ಲಿ ಪಾರ್ಶ್ವವಾಯು ಉಂಟಾಗಿತ್ತು. ಅಂದಿನಿಂದ ಕೇವಲ ನೀರಿನಂಶವಿರುವ ಹಣ್ಣುಗಳನ್ನು ಮಾತ್ರ ಸೇವಿಸುತ್ತಿತ್ತು. ಪೊಲೋ ಜೊತೆ ವಾಸವಾಗಿದ್ದ ಸುಮನ್ ಹಾಗೂ ಸುಗ್ರೀವಾ ಎಂಬ ಗೊರಿಲ್ಲಾಗಳು ಮೃತಪಟ್ಟ ಬಳಿಕ ಇದು ಒಂಟಿಯಾಗಿತ್ತು. [ಮೈಸೂರು ಝೂ ವೆಬ್ ಸೈಟ್ ನೋಡಿ]

ತನ್ನ ತುಂಟಾಗಳ ಮೂಲಕ ಪೋಲೋ ಪ್ರವಾಸಿಗರ ಕಣ್ಮಣಿಯಾಗಿತ್ತು. ಪ್ರವಾಸಿಗರು ಮಾಡಿದಂತೆ ಮಾಡಿ ಅವರ ಮನರಂಜಿಸುತ್ತಿತ್ತು. ಮೃಗಾಲಯದ ಸಿಬ್ಬಂದಿಗಳ ಪ್ರೀತಿಗೆ ಪಾತ್ರವಾಗಿದ್ದ ಪೋಲೋ ಕೋಪ ಬಂದರೆ ಕಿರುಚಾಡುತ್ತಿತ್ತು ಎಂದು ಮೃಗಾಲಯದ ಸಿಬ್ಬಂದಿ ನೆನಪು ಮಾಡಿಕೊಳ್ಳುತ್ತಾರೆ. [ಮೃಗಾಲಯದಲ್ಲಿ ವಾಲಿ ಇನ್ನಿಲ್ಲ]
ಪೋಲೋ ಸಾವಿನಿಂದಾಗಿ ಮೈಸೂರು ಮೃಗಾಲಯದಲ್ಲಿ ಗೊರಿಲ್ಲಾಗಳೇ ಇಲ್ಲದಂತಾಗಿದೆ. ಪಾರ್ಶ್ವವಾಯು ಪೀಡಿತವಾದ ನಂತರ ಮೃಗಾಲಯದ ಪಶುವೈದ್ಯಾಧಿಕಾರಿ ಡಾ.ಜೆ.ಸುಂದರ್ ರಾಜ್ ಪೋಲೋನ ಆರೋಗ್ಯ ನೋಡಿಕೊಳ್ಳುತ್ತಿದ್ದರು. ಮೃಗಾಲಯದ ಆವರಣದಲ್ಲಿ ಪೋಲೋ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ವಾಲಿ ಸಾವನ್ನಪ್ಪಿತ್ತು : ಜಯ ಚಾಮರಾಜೇಂದ್ರ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಗಂಡು ಚಿಂಪಾಂಜಿ ವಾಲಿ ಆ.6ರ ಮಂಗಳವಾರ ಮೃತಪಟ್ಟಿತ್ತು. ಅನಾರೋಗ್ಯಕ್ಕೆ ತುತ್ತಾಗಿದ್ದ ವಾಲಿ ಹಲವು ದಿನಗಳಿಂದ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಅದಕ್ಕೆ ನೀಡಿದ ಚಿಕಿತ್ಸೆಗಳು ಫಲಕಾರಿಯಾಗದೆ ಅದು ಮೃತಪಟ್ಟಿತ್ತು.












Click it and Unblock the Notifications