ಹೆಬ್ಬಲಗುಪ್ಪೆಯಲ್ಲಿ ಬಸ್ ಹಿಂದಿಕ್ಕಲು ಹೋಗಿ ಆಟೋ ಪಲ್ಟಿ: 3 ಸಾವು, 7 ಜನರಿಗೆ ಗಾಯ
ಮೈಸೂರು, ಡಿಸೆಂಬರ್ 18 : ಬಸ್ ಹಿಂದಿಕ್ಕಲು ಹೋದ ಆಟೋ ಆಯತಪ್ಪಿ ಉರುಳಿದ ಪರಿಣಾಮ ಓರ್ವ ವ್ಯಕ್ತಿ, ಮಹಿಳೆ ಹಾಗೂ 9 ತಿಂಗಳ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಎಚ್. ಡಿ ಕೋಟೆ ತಾಲ್ಲೂಕಿನ ಹೆಬ್ಬಲಗುಪ್ಪೆ ಗ್ರಾಮದ ರಸ್ತೆಯಲ್ಲಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ 7 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಹೆಬ್ಬಲಗುಪ್ಪೆಯ ವೀಣಾ(45) ಸ್ಥಳದಲ್ಲೇ ಸಾವನ್ನಪ್ಪಿದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಅನುಪಮಾ ತುಂಬು ಗರ್ಭಿಣಿಯಾಗಿದ್ದು, ಆಕೆಯ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅನುಪಮಾ ಸ್ಥಿತಿ ಗಂಭೀರವಾಗಿದ್ದು, ಸುಮಾ, ಚಿನ್ನಸ್ವಾಮಿ, ಮಹಾದೇವಿ, ರಾಜ ಶೆಟ್ಟಿ, ಮಂಜುಳಾ, ವೆಂಕಟಮ್ಮ, ಪ್ರಮೀಳಮ್ಮ ತೀವ್ರವಾಗಿ ಗಾಯಗೊಂಡಿದ್ದಾರೆ.

ಹೆಬ್ಬಲಗುಪ್ಪೆ, ಆನಗಟ್ಟಿ, ಕೆ.ಜಿ.ಹಳ್ಳಿ, ಹುಲಿಪುರ, ಜಕ್ಕಹಳ್ಳಿ ಮುಂತಾದ ಗ್ರಾಮಗಳ ಸುಮಾರು 15 ಮಂದಿ ಮಧ್ಯಾಹ್ನ ಜಕ್ಕಹಳ್ಳಿ ನಿವಾಸಿಯ ಆಟೋದಲ್ಲಿ ಹ್ಯಾಂಡ್ ಪೋಸ್ಟ್ ನಿಂದ ಹೆಬ್ಬಲಗುಪ್ಪೆ ಗ್ರಾಮಕ್ಕೆ ಪ್ರಯಾಣ ಬೆಳೆಸುತ್ತಿದ್ದರು.
ಆಟೋ ಚಾಲಕ ಮುಂದೆ ಹೋಗುತ್ತಿದ್ದ ಸರ್ಕಾರಿ ಬಸ್ ಅನ್ನು ಹಿಂದಿಕ್ಕುತ್ತಿದ್ದಾಗ ಆಯತಪ್ಪಿದ ಆಟೋ ರಸ್ತೆ ಬದಿಗೆ ಉರುಳಿದ ಪರಿಣಾಮ ಸಾವುನೋವು ಉಂಟಾಗಿದೆ. ಆಟೋ ಚಾಲಕ ನಾಪತ್ತೆಯಾಗಿದ್ದು, ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications