Brand Mysuru Fest: ಜ.26ರಿಂದ ಮೂರು ದಿನ ಮೈಸೂರು ಫೆಸ್ಟ್ 2024: ಕಾರ್ಯಕ್ರಮದ ಮಾಹಿತಿ
ಮೈಸೂರು: ಮೈಸೂರಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಸಿ, ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜ. 26 ರಿಂದ 28ರವರೆಗೆ ಮೈಸೂರು ವಿಶ್ವವಿದ್ಯಾಲಯ ಬಯಲು ರಂಗ ಮಂದಿರದಲ್ಲಿ 'ಬ್ಯ್ರಾಂಡ್ ಮೈಸೂರು ಫೆಸ್ಟ್ 2024' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಮೈಸೂರು ಫೆಸ್ಟ್ ಹಮ್ಮಿಕೊಳ್ಳಲಾಗಿದ್ದು, ಮೈಸೂರಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದು ನಂಬಲಾಗಿದೆ.

ಏನೇನು ಕಾರ್ಯಕ್ರಮ?
ಜ. 26 ರಂದು ಬೆಳಗ್ಗೆ 11.30ಕ್ಕೆ ಚಿತ್ರಸಂತೆ, ಫ್ರೀ ಮಾರ್ಕೆಟ್ ಹಾಗೂ ಮೈಸೂರು ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಜ. 27 ರಂದು ಸಂಜೆ 7ಕ್ಕೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ ಮಹದೇವಪ್ಪ, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಶಾಸಕ ಕೆ.ಹರೀಶ್ ಗೌಡ, ಸಂಸದರಾದ ಪ್ರತಾಪ್ ಸಿಂಹ, ವಿ. ಶ್ರೀನಿವಾಸಪ್ರಸಾಸ್, ಸುಮಲತಾ ಅಂಬರೀಶ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕ್ಲಾಕ್‌ಟವರ್ ಬಳಿ ಚಿತ್ರ ಸಂತೆ
26 ರಂದು 11 ಕ್ಕೆ ಕ್ಲಾಕ್‌ಟವರ್ ಮುಂಭಾಗದಿಂದ ಕುವೆಂಪು ಪ್ರತಿಮೆ ವರಗೆ ಚಿತ್ರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ 27 ರಂದು ಬೆ. 10 ರಿಂದ 11 ರವರೆಗೆ ಮೈಸೂರು ವಿವಿ ಗಣಿತ ವಿಭಾಗದ ಮುಂಭಾಗ ಚಿತ್ರಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.
"ಮೈಸೂರು ಪರಂಪರೆಯನ್ನು ಬಿಂಬಿಸುವ ಅತ್ಯುತ್ತಮ ಕಲಾ ತಂಡಗಳಿಂದ ನಗಾರಿ, ಡೊಳ್ಳು, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳು ಹಾಗೂ ದೊಡ್ಡವರಿಗಾಗಿ ಚಿತ್ರಸಂತೆ, ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಮೈಸೂರು ಸ್ಥಳೀಯ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ದಿಷ್ಟ ಬೆಲೆಗೆ ಒಂದೇ ಸೂರಿನಡಿ ಮಾರಾಟ ಮಾಡಲು ಮಾರ್ಕೆಟಿಂಗ್ ಆಯೋಜನೆ, ಆಹಾರಮೇಳ, ಫ್ಯಾಷನ್ ಶೋ, ಗಾಳಿಪಟ ಉತ್ಸವ, ರಾಕ್ ಬ್ಯಾಂಡ್ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಮಾಹಿತಿ ನೀಡಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಜ.27ರಂದು ಸಂಜೆ 5 ರಿಂದ 7 ರವರೆಗೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ವಾಯಿಲಿನ್ಸ್ ಪ್ಯೂಷನ್, ಚಂಡೆ ಮತ್ತು ನೃತ್ಯ ತಂಡದವರಿಂದ ಉಯಿರೆ ಉಯಿರೆ ಬಿಜಿಎಂ ಚೆಮ್ಮನ್ ಬ್ಯಾಂಡ್ ಹಾಗೂ 8 ರಿಂದ 10 ರವರೆಗೆ ಅಂತಾರಾಷ್ಟ್ರೀಯ ಗಾಯಕ ಪೃಥ್ವಿ, ಸವಾರಿ ಹಾಗೂ ನೂರು ಸಿನಿಮಾಗಳ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಹಾಗೂ ಬಾಂಬೆ ಸಿಂಗರ್ ಅಂಶಿಕ ಅಯ್ಯರ್ ತಂಡದಿಂದ ಗಾನ ಮಾಧುರ್ಯ ಕಾರ್ಯಕ್ರಮಗಳನ್ನು ಕೊಳ್ಳಲಾಗಿದೆ.
ಹಾಸ್ಯ ದರ್ಬಾರ್, ಗಾಯನ ಮೋಡಿ
ಜನವರಿ 28ರಂದು ಸಂಜೆ 6ರಿಂದ 8ರವರೆಗೆ ಹಾಸ್ಯ ದರ್ಬಾರ್ ಮತ್ತು ರಾತ್ರಿ 8ರಿಂದ 10ರವರೆಗೆ ಖ್ಯಾತ ಚಲನಚಿತ್ರ ಗಾಯಕ ಸಂತೋಷ್ ವೆಂಕಿ ಲೈವ್ ಇನ್ ಕಾನ್ಸರ್ಟ್ ಮತ್ತು ನೃತ್ಯ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಸ್ಥಳೀಯ ಉತ್ಪನ್ನ ಮಾರಾಟ
ಪ್ಲೇ ಮಾರ್ಕೆಟ್ (ಒಂದೇ ಸೂರಿನಡಿ ಸ್ಥಳೀಯ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ) ಬಯಲು ರಂಗಮಂದಿರ ಹೊರಾವರಣಕ್ಕೆ ಹೊಂದುಕೊಂಡಂತೆ 50 ಮಳಿಗೆ ನಿರ್ಮಿಸಲಾಗಿದೆ. ಕ್ಲಾಕ್ ಟವರ್ ಪಕ್ಕದ ಆಟದ ಮೈದಾನಲ್ಲಿ ಫುಡ್ ಫೆಸ್ಟ್ ಆಯೋಜಿಸಲಾಗಿದೆ. ಇಲ್ಲಿ 60 ಮಳಿಗೆ ಇರಲಿದೆ.












Click it and Unblock the Notifications