Breaking; ಮೈಸೂರಿನಲ್ಲಿ 2ನೇ ಓಮಿಕ್ರಾನ್ ಪ್ರಕರಣ ದಾಖಲು
ಮೈಸೂರು, ಡಿಸೆಂಬರ್ 28; ಹೊಸ ವರ್ಷವನ್ನು ಸ್ವಾಗತಿಸಲು ಜನರು ತಯಾರಾಗುತ್ತಿದ್ದಾರೆ. ಈ ನಡುವೆ ಕೋವಿಡ್ ರೂಪಾಂತರಿ ಓಮಿಕ್ರಾನ್ ಜನರಲ್ಲಿ ಆತಂಕ ಮೂಡಿಸಿದೆ. ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ 2ನೇ ಓಮಿಕ್ರಾನ್ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳ ಹಿಂದೆ ನಗರದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ದಾಖಲಾಗಿತ್ತು. ಇದೀಗ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ತಾಂಜೇನಿಯಾದಿಂದ ಮೈಸೂರು ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದ ವಿದ್ಯಾರ್ಥಿನಿಗೆ ಓಮಿಕ್ರಾನ್ ದೃಢಪಟ್ಟಿದೆ.
ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿನಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ವಿದ್ಯಾರ್ಥಿನಿ ಸ್ವ್ಯಾಬ್ ಸಂಗ್ರಹ ಮಾಡಿ, ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ಗೆ ಒಳಪಡಿಸಲಾಗಿತ್ತು.

ಯುವತಿಯ ಪರೀಕ್ಷೆ ವರದಿಯಲ್ಲಿ ಓಮಿಕ್ರಾನ್ ಸೋಂಕು ಖಚಿತವಾಗಿದೆ. ಮೈಸೂರಿನ ಆರೋಗ್ಯ ಇಲಾಖೆ ಸಿಬ್ಬಂದಿ ಆಕೆಯನ್ನು ಸರ್ಕಾರಿ ಆಸ್ಪತ್ರೆಯೊಂದರ ಪ್ರತ್ಯೇಕ ಕೋಣೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ.
ಕರ್ನಾಟಕದಲ್ಲಿ ಓಮಿಕ್ರಾನ್ ಸೋಂಕಿತರ ಒಟ್ಟು ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಇನ್ನೂ ಹೊಸ ವರ್ಷದಲ್ಲಿ ಓಮಿಕ್ರಾನ್ ಸೋಂಕಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ. ಜನವರಿ ಅಥವಾ ಫೆಬ್ರವರಿ ತಿಂಗಳು ನಿರ್ಣಾಯಕ ಸಮಯವಾಗಿದೆ.
ಡಿಸೆಂಬರ್ 23ರಂದು ಮೈಸೂರು ನಗರದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಪತ್ತೆಯಾಗಿತ್ತು. 9 ವರ್ಷದ ಹೆಣ್ಣು ಮಗುವಿಗೆ ಓಮಿಕ್ರಾನ್ ದೃಢಪಟ್ಟಿತ್ತು. ಡಿಸೆಂಬರ್ 19ರಂದು ಪೋಷಕರ ಜೊತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಗುವಿನಲ್ಲಿ ಓಮಿಕ್ರಾನ್ ಸೋಂಕು ಕಂಡುಬಂದಿದ್ದು, ಮಗುವಿನ ಪೋಷಕರಿಗೆ ಓಮಿಕ್ರಾನ್ ವರದಿ ನೆಗೆಟಿವ್ ಬಂದಿದೆ.












Click it and Unblock the Notifications