ಮುಡಾದಿಂದ ತಯಾರಾಗಲಿದೆ 2 ಸಾವಿರ ಗುಂಪು ಮನೆ ಯೋಜನೆ
ಮೈಸೂರು, ಜುಲೈ 22: ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಮನೆಗಳನ್ನು ಒದಗಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಇದಕ್ಕೆ ತಯಾರಿ ಆರಂಭಗೊಂಡಿದೆ. ಇದೊಂದು ಗುಂಪು ಯೋಜನೆಯಾಗಿದ್ದು 2 ಸಾವಿರಕ್ಕೂ ಹೆಚ್ಚು ಮನೆಗಳು ಜನರ ಕೈಸೇರುವ ನಿರೀಕ್ಷೆಯಿದೆ.
ಹತ್ತು ವರ್ಷಗಳ ಹಿಂದೆಯೇ, ತಮಗೆ ನಿವೇಶನ ಬೇಕೆಂದು ಅರ್ಜಿ ಸಲ್ಲಿಸಿದ್ದ ಸಾವಿರಾರು ಮಂದಿಗೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ.
ಮನೆ ನಿರ್ಮಾಣ ಮಾಡಲು ಮುಡಾಗೆ ಭೂಮಿಯೂ ಸಿಕ್ಕಿರಲಿಲ್ಲ. ಈ ಹಿನ್ನೆಲೆ ಮೈಸೂರು ನಗರದ ವಿವಿಧ ಬಡಾವಣೆಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ಜಾಗವನ್ನೇ ಬಳಸಿಕೊಂಡು ಬಹುಮಹಡಿ ಕಟ್ಟಡ ನಿರ್ಮಿಸಲು ಮುಂದಾಗಿದೆ. ಆ ಮನೆಗಳನ್ನು ಕೈಗೆಟಕುವ ದರದಲ್ಲಿ ಪ್ರಾಧಿಕಾರಕ್ಕೂ ಭಾರವಾಗದಂತೆ ನಿಯಮಾನುಸಾರ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಗುಂಪು ಮನೆ ಯೋಜನೆಯನ್ನು ರೂಪಿಸಲು ಪಾಲಿಕೆ ಮುಂದಾಗಿದೆ.

ಮೈಸೂರಿನ 4 ಕಡೆಗಳಲ್ಲಿ 2000 ಗುಂಪು ಮನೆಗಳನ್ನು ನಿರ್ಮಿಸುವ ಈ ಯೋಜನೆಗೆ ಮುಡಾ ಸಭೆಯು ಅನುಮತಿ ನೀಡಿದ್ದು, ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ. ಹೀಗಿದ್ದರೂ ಮನೆ ಹಂಚಿಕೆ ಹಾಗೂ ಗುಂಪು ಮನೆಗಳ ನಿರ್ಮಾಣಕ್ಕೆ ಸ್ಪಷ್ಟ ನಿಯಮ ರೂಪಿಸಬೇಕಿರುವುದರಿಂದ ಮುಡಾ ಎದುರು ನೋಡುತ್ತಿದೆ.
ಈಗಾಗಲೇ ಮೈಸೂರಿನ ಸುತ್ತಮುತ್ತಲೂ ಗೃಹ ನಿರ್ಮಾಣ ಸಹಕಾರ ಸಂಘಗಳು, ಡೆವಲಪರ್ ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ತರಾತುರಿಯಲ್ಲಿ ವಸತಿ ಬಡಾವಣೆ ರಚಿಸಿ, ನಿವೇಶನ ಮಾರಾಟ ಮಾಡುತ್ತಿದ್ದಾರೆ. ಅದಷ್ಟೇ ಅಲ್ಲದೇ ಅಪಾರ್ಟ್ ಮೆಂಟ್ ಗಳನ್ನು ನಿರ್ಮಿಸಿ ಮನೆಗಳನ್ನು ಮಾರಾಟ ಮಾಡುತ್ತಿರುವುದರಿಂದ ಮುಡಾದವರಿಗೆ ಭೂಮಿ ಸಿಗುವ ಪ್ರಮಾಣ ಕಡಿಮೆಯಾಗಿದೆ.
ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾದರೆ 50:50 ಭಾಗದಲ್ಲಿ ಮುಡಾಗೆ ಭೂಮಿ ನೀಡಲು ರೈತರು ಹಿಂದೇಟು ಹಾಕುತ್ತಿರುವುದರಿಂದ ಹೊಸ ಬಡಾವಣೆ ನಿರ್ಮಾಣವೂ ಕಷ್ಟ ಸಾಧ್ಯವಾಗಿ ಪರಿಣಮಿಸಿದೆ. ಅದೇ ಕಾರಣಕ್ಕೆ ಪ್ರಾಧಿಕಾರವು ಭೂಮಿ ಖರೀದಿಸುವ ಬದಲು ಮೈಸೂರು ನಗರದ ವಿಜಯನಗರದ ಒಂದು, ಮೂರು ಹಾಗೂ ನಾಲ್ಕನೇ ಹಂತ ಹಾಗೂ ದಟ್ಟಗಳ್ಳಿಯಲ್ಲಿ ಪ್ರಾಧಿಕಾರಕ್ಕೆ ಸೇರಿದ ಖಾಲಿ ಜಾಗದಲ್ಲಿ 4 ಕಡೆ ಗುಂಪು ಮನೆಗಳನ್ನು ನಿರ್ಮಿಸಲು ಸಿದ್ಧತೆ ನಡೆಸಿದೆ.
ಈಗಾಗಲೇ ಡ್ರಾಫ್ಟ್ ರೂಲ್ಸ್ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಅಂತಿಮ ನಿಯಮ ರೂಪಿಸಿ ಅಭಿಪ್ರಾಯಕ್ಕಾಗಿ ಕಾನೂನು ಶಾಖೆಗೆ ಕಳುಹಿಸಿದೆ. ಅಲ್ಲಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಬಳಿಕ ಗುಂಪು ಮನೆ ನಿರ್ಮಾಣಕ್ಕೆ ಮುಡಾ ತಯಾರಾಗಲಿದೆ. ಈ ಯೋಜನೆ ಅನುಷ್ಠಾನಗೊಂಡಲ್ಲಿ ಸಾವಿರಾರು ಕುಟುಂಬಗಳ ಕನಸಿನ ಮನೆ ನನಸಾಗಲಿದೆ.











Click it and Unblock the Notifications