ಎಚ್ ಡಿಕೆ, ಡಿಕೆಶಿಯನ್ನು ಭೇಟಿ ಮಾಡಲು ಇಷ್ಟವಿಲ್ಲ: ಪೊಲೀಸರಿಗೆ ಅತೃಪ್ತರ ಪತ್ರ
Recommended Video
ಮುಂಬೈ, ಜುಲೈ 10: ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ರಿಂದ ರಕ್ಷಣೆ ಕೊಡಬೇಕು ಎಂದು ಶನಿವಾರದಿಂಲ್ಲಿ ಬೀಡು ಬಿಟ್ಟಿರುವ ಅತೃಪ್ತ್ ಶಾಸಕರು ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ. ಮುಂಬೈ ಪೊಲೀಸ್ ಕಮಿಷನರ್ ಗೆ ಪತ್ರ ಬರೆದಿರುವ ಹತ್ತು ಶಾಸಕರು, ಬುಧವಾರ ಬೆಳಗ್ಗೆ ಮುಂಬೈಗೆ ಬರಲಿರುವ ಇವರಿಬ್ಬರು ನಾಯಕರನ್ನು ಭೇಟಿ ಆಗಲು ಬಯಸುವುದಿಲ್ಲ ಎಂದಿದ್ದಾರೆ.
ಶಾಸಕರಾದ ಶಿವರಾಮ್ ಹೆಬ್ಬಾರ್, ಪ್ರತಾಪ್ ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ, ಎಚ್.ವಿಶ್ವನಾಥ್, ನಾರಾಯಣ್ ಗೌಡ ಹಾಗೂ ಮಹೇಶ್ ಕುಮಟಳ್ಳಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರು ನಾವಿರುವ ಹೋಟೆಲ್ ಗೆ ಬರಬಹುದು ಎಂಬ ಮಾಹಿತಿ ಕೇಳಿದೆವು. ನಮಗೆ ಇದರಿಂದ ಆತಂಕ ಎದುರಾಗಿದೆ. ನಾವು ಅವರನ್ನು ಭೇಟಿ ಆಗಲು ಬಯಸುವುದಿಲ್ಲ. ದಯವಿಟ್ಟು ನಮಗೆ ಈ ವಿಷಯದಲ್ಲಿ ಸಹಾಯ ಮಾಡಿ. ಅವರಿಗೆ ಹೋಟೆಲ್ ಆವರಣ ಪ್ರವೇಶಿಸಲು ಅವಕಾಶ ನೀಡಬೇಡಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಶಾಸಕರು ಶನಿವಾರ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ ನಂತರ ಖಾಸಗಿ ವಿಮಾನದಲ್ಲಿ ಮುಂಬೈಗೆ ತೆರಳಿ, ಪಂಚತಾರಾ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಸದ್ಯದ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ದೂರಿದೆ. ಅತೃಪ್ತ ಶಾಸಕರು ಉಳಿದುಕೊಂಡಿರುವ ಹೋಟೆಲ್ ಗೆ ಬಿಜೆಪಿಯ ನಾಯಕರು ಬಂದು ಹೋಗುತ್ತಿರುವುದನ್ನು ಉದಾಹರಿಸಿದೆ.
ಅತೃಪ್ತ ಶಾಸಕರು ಉಳಿದುಕೊಂಡಿರುವ ಸೋಫಿಟೆಲ್ ಹೋಟೆಲ್ ಗೆ ಮುಂಬೈ ಪೊಲೀಸರು ಭಾರೀ ಭದ್ರತೆ ಒದಗಿಸಿದ್ದಾರೆ. ಆದರೆ ನೆರೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ಆ ಶಾಸಕರನ್ನು ಭೇಟಿ ಆಗಲು ತೆರಳುವಾಗ ತಡೆಯುವುದು ಸುಲಭವಲ್ಲ. ಪೊಲೀಸರಿಗೆ ಶಾಸಕರು ಮನವಿ ಪತ್ರ ನೀಡಿದ್ದರೂ ಅದು ಕಷ್ಟ ಎನ್ನಲಾಗುತ್ತಿದೆ.












Click it and Unblock the Notifications