ಲೋಕಸಭೆ ಚುನಾವಣೆಗೆ ಉದ್ಧವ್ ಠಾಕ್ರೆ ನೇತೃತ್ವವಿಲ್ಲ: ಶಿವಸೇನೆ ಬಂಡಾಯ ಶಾಸಕ
ಮುಂಬೈ, ಜುಲೈ 21: 2024ರ ಲೋಕಸಭೆ ಚುನಾವಣೆಗೆ ಉದ್ಧವ್ ಠಾಕ್ರೆ ಗೆಲ್ಲುವ ಮುಖವಲ್ಲ ಮತ್ತು ಅವರು ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ ಎಂದು ಶಿವಸೇನೆ ಬಂಡಾಯ ನಾಯಕ ರಾಹುಲ್ ಶೆವಾಲೆ ಗುರುವಾರ ಹೇಳಿದ್ದಾರೆ.
'ಮುಂದಿನ ಲೋಕಸಭೆ ಚುನಾವಣೆಗೆ ನಾಯಕತ್ವದ ವಿಷಯವಾಗಿ ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ ಅವರೊಂದಿಗೆ ಹಲವಾರು ಸಭೆಗಳನ್ನು ನಡೆಸಲಾಗಿದೆ. ನಾನು ಠಾಕ್ರೆ ಅವರೊಂದಿಗಿನ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ನಾಯಕತ್ವದ ವಿಷಯವನ್ನು ಪ್ರಸ್ತಾಪಿಸಿದೆ. ಉಪಸ್ಥಿತರಿದ್ದ ಸಂಜಯ್ ರಾವತ್ ಅವರು ಚುನಾವಣೆಯ ನೇತೃತ್ವವನ್ನು ಠಾಕ್ರೆ ತೆಗೆದುಕೊಳ್ಳಲಿದ್ದಾರೆ ಎಂದು ಸನ್ನೆ ಮಾಡಿದರು. ನಾವು ಠಾಕ್ರೆ ಅವರನ್ನು ಗೌರವಿಸುತ್ತೇವೆ ಆದರೆ ನಾವು ವಾಸ್ತವಿಕವಾಗಿರಬೇಕು ಎಂದು ನಾನು ಹೇಳಿದೆ. ಅವರು ಲೋಕಸಭೆ ಚುನಾವಣೆ ನೇತೃತ್ವ ವಹಿಸಲು ಸಾಧ್ಯವಿಲ್ಲ' ಎಂದು ಬಂಡಾಯ ನಾಯಕ ರಾಹುಲ್ ಶೆವಾಲೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಮೈತ್ರಿಯಲ್ಲಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಹಲವಾರು ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಗಳಾಗಿರುವುದರಿಂದ ವಿಷಯಗಳನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಇದಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಯುಪಿಎ ಚುನಾವಣೆಗಳನ್ನು ಎದುರಿಸಲಿದೆ, ಇದು ನಮ್ಮ ಕಾರ್ಯಕರ್ತರಿಗೆ ಸ್ವೀಕಾರಾರ್ಹವಲ್ಲ" ಎಂದು ತಿಳಿಸಿದ್ದಾರೆ.

ಶಿವಸೇನೆಯಲ್ಲಿ ದೊಡ್ಡ ಪ್ರಮಾಣದ ಬಂಡಾಯದ ಕಾರಣದಿಂದ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ, ಜೂನ್ 30 ರಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ನೇಮಕಗೊಂಡ ಶಿವಸೇನಾ ಬಂಡಾಯಗಾರ ಏಕನಾಥ್ ಶಿಂಧೆ ಅವರಿಗೆ ಶೆವಾಲೆ ಮತ್ತು ಇತರ 11 ಲೋಕಸಭಾ ಸದಸ್ಯರು ಬೆಂಬಲ ಸೂಚಿಸಿದ್ದಾರೆ.
ಹೆಚ್ಚಿನ ಸಂಖ್ಯೆಯ ಶಿವಸೇನಾ ನಾಯಕರು ಬಿಜೆಪಿಯೊಂದಿಗೆ ಮೈತ್ರಿಗೆ ಒಲವು ತೋರಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎಂದು ರಾಹುಲ್ ಶೆವಾಲೆ ತಿಳಿಸಿದ್ದಾರೆ.
ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯ ಚರ್ಚೆಯ ಸಮಯದಲ್ಲಿ ಪಕ್ಷದ ನಾಯಕತ್ವವು ಎನ್‌ಸಿಪಿಗೆ ಪ್ರಮುಖ ಲೋಕಸಭಾ ಕ್ಷೇತ್ರಗಳನ್ನು ನೀಡಿದಾಗ ಶಿವಸೇನೆ ನಾಯಕರು ಪಕ್ಷದೊಳಗೆ ಅಸುರಕ್ಷಿತ ಭಾವನೆಯನ್ನು ಅನುಭವಿಸಲು ಪ್ರಾರಂಭಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications