ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಶಿವಸೇನೆ 25 ವರ್ಷ ವ್ಯರ್ಥ ಮಾಡಿದೆ; ಉದ್ಧವ್ ಠಾಕ್ರೆ
ಮುಂಬೈ, ಜನವರಿ 24: "ಬಿಜೆಪಿಯೊಂದಿಗಿನ ಮೈತ್ರಿಯ ಭಾಗವಾಗಿ ತಮ್ಮ ಪಕ್ಷವು 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ನಾನು ಇನ್ನೂ ನಂಬುತ್ತೇನೆ," ಎಂದು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿಯಲು ಶಿವಸೇನೆ ಪಕ್ಷ ನಿರ್ಧರಿಸಿದ ಸುಮಾರು ಎರಡು ವರ್ಷಗಳ ನಂತರ, ಮಹಾರಾಷ್ಟ್ರ ಸಿಎಂ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶಿವಸೇನೆ ಪಕ್ಷದ ಸಂಸ್ಥಾಪಕ ಮತ್ತು ಅವರ ತಂದೆ ಬಾಳಾಸಾಹೇಬ್ ಠಾಕ್ರೆ ಅವರ 96ನೇ ಜನ್ಮದಿನದ ಸಂದರ್ಭದಲ್ಲಿ ವರ್ಚುವಲ್ ಮೋಡ್ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶಿವಸೇನೆಯ ಮಾಜಿ ಮೈತ್ರಿ ಜೊತೆಗಾರ ಬಿಜೆಪಿಯ ಬಗ್ಗೆ ಕಟುವಾದ ಹೇಳಿಕೆಗಳನ್ನು ನೀಡಿದರು.
"ಶಿವಸೇನೆಯು 25 ವರ್ಷಗಳ ಕಾಲ ಬಿಜೆಪಿಯೊಂದಿಗೆ ತನ್ನ ಸಮಯವನ್ನು ವ್ಯರ್ಥ ಮಾಡಿದೆ ಎಂದು ಹೇಳುವ ಮೂಲಕ ಮಾತು ಪ್ರಾರಂಭಿಸಿದ ಉದ್ಧವ್ ಠಾಕ್ರೆ, "ನನ್ನ ಏಕೈಕ ನಿರಾಶೆ ಎಂದರೆ ಒಂದು ಕಾಲದಲ್ಲಿ ಅವರು ನಮ್ಮ ಸ್ನೇಹಿತರಾಗಿದ್ದರು. ಮಹಾರಾಷ್ಟ್ರದಲ್ಲಿ ನಾವು ಅವರನ್ನು ಬೆಳೆಸಿದ್ದೇವೆ. ನಾನು ಮೊದಲೇ ಹೇಳಿದಂತೆ ಬಿಜೆಪಿಯೊಂದಿಗೆ ನಮ್ಮ 25 ವರ್ಷಗಳ ಮೈತ್ರಿ ವ್ಯರ್ಥವಾಯಿತು,'' ಎಂದು ಠಾಕ್ರೆ ಹರಿಹಾಯ್ದರು.

ಶಿವಸೇನೆ ತನ್ನ ಹಿಂದುತ್ವದ ನಿಲುವನ್ನು ಬಿಟ್ಟಿಲ್ಲ ಎಂದು ಒತ್ತಿ ಹೇಳಿದ ಸಿಎಂ ಉದ್ಧವ್ ಠಾಕ್ರೆ, "ಶಿವಸೇನೆಯ ಪ್ರಮುಖರು ನಮಗೆ ಹಿಂದುತ್ವದ ಬಗ್ಗೆ ಹೇಳಿದ್ದರು. ನಮಗೆ ಹಿಂದುತ್ವಕ್ಕೆ ಅಧಿಕಾರ ಬೇಕು. ನಾವು ಈಗ ನೋಡುತ್ತಿರುವುದು ಇವರಿಂದ (ಬಿಜೆಪಿ) ಅನುಸರಿಸುತ್ತಿರುವ ಹಿಂದುತ್ವ, ಕೇವಲ ನೆಪ ಮಾತ್ರ".
"ಅವರ ಹಿಂದುತ್ವ ಅಧಿಕಾರಕ್ಕಾಗಿ ಇದೆ. ಅವರು ಕೇವಲ ಹಿಂದುತ್ವದ ಹುಸಿ ಮುಖವಾಡ ತೊಟ್ಟಿದ್ದಾರೆ. ಜನರು ನಮ್ಮನ್ನು ಕೇಳುತ್ತಾರೆ, ನೀವು ಹಿಂದುತ್ವವನ್ನು ಬಿಟ್ಟಿದ್ದೀರಾ? ಎಂದು. ಆದರೆ ನಾವು ಬಿಜೆಪಿ ಬಿಟ್ಟಿದ್ದೇವೆಯೇ ಹೊರತು ಹಿಂದುತ್ವವನ್ನಲ್ಲ. ಬಿಜೆಪಿ ಎಂದರೆ ಹಿಂದುತ್ವವಲ್ಲ,'' ಎಂದು ಕಿಡಿಕಾರಿದರು.
ಬಿಜೆಪಿ ಅಧಿಕಾರಕ್ಕೆ ಬರಲು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಸಿಎಂ ಉದ್ಧವ್ ಠಾಕ್ರೆ ಆರೋಪಿಸಿದರು. ಬಿಜೆಪಿಯ ತತ್ವವೆಂದರೆ ಯೂಸ್ ಅಂಡ್ ಥ್ರೋ ನೀತಿ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿದ್ದ ದಿನಗಳು ನೆನಪಿದೆಯೇ? ಆ ಸಮಯದಲ್ಲಿ ಅವರಿಗೆ ನಮ್ಮ ಅಗತ್ಯವಿತ್ತು ಮತ್ತು ಅದಕ್ಕಾಗಿಯೇ ಅವರು ಪ್ರಾದೇಶಿಕ ಪಕ್ಷಗಳೊಂದಿಗೆ ನಮ್ಮೊಂದಿಗೆ, ಅಕಾಲಿದಳ ಮತ್ತು ಟಿಎಂಸಿಯೊಂದಿಗೆ ಮೈತ್ರಿ ಮಾಡಿಕೊಂಡರು.
ಎಲ್ಲರನ್ನೂ ಒಗ್ಗೂಡಿಸಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಚಿಸಿದರು. ನಾವು ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದೇವೆ. ಆದರೆ ಈಗ ಈ ನವ-ಹಿಂದುತ್ವವಾದಿಗಳು ಹಿಂದುತ್ವವನ್ನು ತಮ್ಮ ಲಾಭಕ್ಕಾಗಿ ಮಾತ್ರ ಬಳಸುತ್ತಿದ್ದಾರೆ ಎಂದು ಸಿಎಂ ಠಾಕ್ರೆ ಆರೋಪಿಸಿದರು.
ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸುವ ಗೃಹ ಸಚಿವ ಅಮಿತ್ ಶಾ ಅವರ ಸವಾಲಿಗೆ ಉತ್ತರಿಸಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, "ನಾವು ಏಕಾಂಗಿಯಾಗಿ ಹೋರಾಡಲು ಸಿದ್ಧರಿದ್ದೇವೆ, ಆದರೆ ನಿಮ್ಮ ಅಧಿಕಾರವನ್ನು ಸರ್ಕಾರವಾಗಿ ಬಳಸಬೇಡಿ ಎಂಬುದು ನನ್ನ ಷರತ್ತು. ನಾವೂ ನಮ್ಮ ಶಕ್ತಿಯನ್ನು ಬಳಸುವುದಿಲ್ಲ. ಎರಡು ರಾಜಕೀಯ ಪಕ್ಷಗಳಾಗಿ ಹೋರಾಡೋಣ. ಇಡಿ, ಆದಾಯ ತೆರಿಗೆಯನ್ನು ಬಳಸುವುದು ಸರಿಯಲ್ಲ ಎಂದು ತಿಳಿಸಿದರು.












Click it and Unblock the Notifications