ಜಯಲಲಿತಾ ನಂತರ ಸಲ್ಲೂಗೆ 'ದೇವರಾದ' ಸಾಳ್ವೆ
ಮುಂಬೈ, ಮೇ.7: 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ಅಪರಾಧಿ ಎನಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಇನ್ನೇನು ಜೈಲು ಸೇರುತ್ತಾರೆ ಎನ್ನುವಷ್ಟರಲ್ಲಿ ಅವರ ಕೈ ಹಿಡಿದು ಬಚಾವ್ ಮಾಡಿದ್ದು ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಹರೀಶ್ ಸಾಳ್ವೆ.
ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪಾಲಿಗೆ ದೇವರಾಗಿದ್ದ ಸಾಳ್ವೆ ಈಗ ಸಲ್ಲೂಗೆ ಅಭಯ ನೀಡಿದ್ದಾರೆ. ಇನ್ಮುಂದೆ ಕೂಡಾ ಸಲ್ಲೂಗೆ ರಕ್ಷಣೆ ನೀಡುತ್ತಾರೋ ಕಾದುನೋಡಬೇಕಿದೆ.[ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]
ಸಲ್ಮಾನ್ ಗೆ ಅಷ್ಟು ಬೇಗ ಜಾಮೀನು ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಹರೀಶ್ ಸಾಳ್ವೆ. ಮಧ್ಯಾಹ್ನ ಸೆಷನ್ಸ್ ಕೋರ್ಟ್ ನಲ್ಲಿ ಶ್ರೀಕಾಂತ್ ಶಿವಾಡೆ ಅವರು ಇರೋ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಶಿಕ್ಷೆ ಪ್ರಮಾಣವನ್ನು 3 ವರ್ಷಕ್ಕೆ ಇಳಿಸಲು ಯತ್ನಿಸಿ ವಿಫಲರಾಗಿದ್ದರು. ಜಡ್ಜ್ ಡಬ್ಲ್ಯೂಡಿ ದೇಶಪಾಂಡೆ ಅವರು 5 ವರ್ಷ ಶಿಕ್ಷೆ 25 ಸಾವಿರ ರು ದಂಡ ವಿಧಿಸಿದ್ದರು.

ಶಿಕ್ಷೆ ಪ್ರಮಾಣ 3 ವರ್ಷಕ್ಕಿಂತ ಮೇಲ್ಪಟ್ಟಿದ್ದರಿಂದ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದು ಅನಿವಾರ್ಯವಾಗಿತ್ತು. ಅತುರವಾಗಿ ಅದೇಶದ ಪ್ರತಿ ಪಡೆದು ಅರ್ಜಿ ಹಾಕಿದ ಸಲ್ಮಾನ್ ಅವರ ಪರ ವಾದಿಸಲು ಹರೀಶ್ ಸಾಳ್ವೆ ಅವರನ್ನು ಕರೆಸಿಕೊಳ್ಳಲಾಯಿತು. [ಸಲ್ಮಾನ್ ಶಿಕ್ಷೆ ಕಡಿಮೆ ಮಾಡಿದ 'ಬೀಯಿಂಗ್ ಹ್ಯೂಮನ್']
ಬಾಂಬೆ ಹೈಕೋರ್ಟ್ ನಲ್ಲಿ ಜಸ್ಟೀಸ್ ಅಭಯ್ ತಿಪ್ಸೆ ಮುಂದೆ ವಾದ ಮಂಡಿಸಿದ ಹರೀಶ್ ಸಾಳ್ವೆ ಅವರು 10 ನಿಮಿಷಗಳಲ್ಲೇ ಮಧ್ಯಂತರ ಜಾಮೀನು ಸಿಗುವಂತೆ ಮಾಡಿದರು.
ಇಂಥ ಸಾಧನೆಗಳನ್ನು ಮಾಡುವಲ್ಲಿ ಸಫಲರಾಗಿರುವುದರಿಂದಲೇ ಸಾಳ್ವೆ ಅವರ ಚಾರ್ಜ್ ಕೂಡಾ ಹಾಗೆ ಇದೆ. ದಿನವೊಂದಕ್ಕೆ 30 ಲಕ್ಷ ರು ಪಡೆಯುತ್ತಾರೆ. ದೊಡ್ಡ ದೊಡ್ಡ ರಾಜಕಾರಣಿಗಳು, ಕಾರ್ಪೊರೇಟ್ ಹೌಸ್, ಸೆಲೆಬ್ರಿಟಿಗಳೇ ಇವರ ಕ್ಲೈಂಟುಗಳು.. ಹರೀಶ್ ಸಾಳ್ವೆ ಬಗ್ಗೆ ಇನ್ನಷ್ಟು ವಿವರ ಮುಂದೆ... [ಊಟಕ್ಕೂ ಕಷ್ಟವಾಗಿದೆ : ಸತ್ತ ನೂರುಲ್ಲಾ ಪತ್ನಿ]
ಮಾಜಿ ಸಾಲಿಸಿಟರ್ ಜನರಲ್
* 56 ವರ್ಷ ವಯಸ್ಸಿನ ಸಾಳ್ವೆ ಅವರು ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಆಗಿ ನವೆಂಬರ್ 1999 ರಿಂದ 2002ರ ತನಕ ಕಾರ್ಯನಿರ್ವಹಿಸಿದರು.
* 1980ರಲ್ಲಿ ವಕೀಲಿಕೆ ಆರಂಭಿಸಿದ ಸಾಳ್ವೆ ಅವರು ಜೆಬಿ ದಾದಾಚಂದ್ ಜಿ ಅಂಡ್ ಕೋ ನಲ್ಲಿ ಅಭ್ಯಾಸ ಮಾಡಿದರು.
* ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅವರ ಬಳಿ 1980 ರಿಂದ 1986 ರ ತನಕ ಕಾರ್ಯನಿರ್ವಹಿಸಿ ಅನುಭವ ಪಡೆದರು.
* ಇಂಗ್ಲೀಷ್ ಬಾರ್ ಹಾಗೂ ಬ್ಲಾಕ್ ಸ್ಟೋನ್ ಚೇಂಬರ್ಸ್ ಗೆ 2013ರಲ್ಲಿ ನೇಮಕಗೊಂಡ ಗೌರವ ಹೊಂದಿದ್ದಾರೆ.
ಕುಟುಂಬ ವಿವರ:
* ಹರೀಶ್ ಸಾಳ್ವೆ ಅವರ ತಂದೆ ಎನ್ ಕೆಪಿ ಸಾಳ್ವೆ ಅವರು ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಹೆಸರು ಮಾಡಿದ್ದಾರೆ. ತಾಯಿ ಅಂಬೃತಿ ಸಾಳ್ವೆ ವೃತ್ತಿಯಿಂದ ವೈದ್ಯರು. [ಜೈಲಿಗೆ ಕಳಿಸಿದ ಹೀರೋ ಈ ಬಾಡಿಗಾರ್ಡ್]
* ಅಜ್ಜ ಪಿಕೆ ಸಾಳ್ವೆ ಕ್ರಿಮಿನಲ್ ಲಾಯರ್ ಆಗಿದ್ದರು.
ಕೇಸುಗಳು ಹಾಗೂ ಕ್ಲೈಂಟುಗಳು:
* ಪರಿಸರ ಸಂಬಂಧಿ ವ್ಯಾಜ್ಯಗಳನ್ನು ಪರಿಹರಿಸಲು ಅಮಿಕ್ಯೂಸ್ ಕ್ಯೂರಿಯಾಗಿ ಸುಪ್ರೀಂಕೋರ್ಟಿನಿಂದ ನೇಮಕಗೊಂಡಿದ್ದಾರೆ.
* ಕೃಷ್ಣಾ ಗೋದಾವರಿ ಕಣಿವೆ ಪ್ರಕರಣದಲ್ಲಿ ರಿಲಯನ್ಸ್ ನ ಮುಖೇಶ್ ಅಂಬಾನಿ ಅವರ ಪರ ವಾದಿಸಿದರು.
* ಟಾಟಾ ಸಮೂಹ ಹಾಗೂ ಐಟಿಸಿ ಲಿಮಿಟೆಡ್ ಇವರ ಕ್ಲೈಂಟ್ಸ್.
* ವೋಡಾಫೋನ್ ನ 2.5 ಬಿಲಿಯನ್ ತೆರಿಗೆ ವಂಚನೆ ಪ್ರಕರಣದಲ್ಲಿ ವೋಡಾಫೋನ್ ಪರ ವಾದಿಸಿ ಬಾಂಬೆ ಹೈಕೋರ್ಟ್ ನಲ್ಲಿ ಸೋತರೂ ಸುಪ್ರೀಂಕೋರ್ಟ್ ನಲ್ಲಿ ಜಯ ಪಡೆದರು.
* ಬಾಬಾ ರಾಮದೇವ್ ಸಮಾವೇಶದ ದಾಳಿ ಕೇಸಿನಲ್ಲಿ ದೆಹಲಿ ಪೊಲೀಸ್ ಪರ ವಾದಿಸಿದರು.
* ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಾಮೀನು ದೊರಕಿಸಿಕೊಟ್ಟರು.
ಫೀ ಎಷ್ಟಿದೆ?:
* ಹರೀಶ್ ಸಾಳ್ವೆ ದಿನವೊಂದಕ್ಕೆ 30 ಲಕ್ಷ ರು ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ.
* ಕೃಷ್ಣಾ ಗೋದಾವರಿ ಕೇಸಿನಲ್ಲಿ ಮುಖೇಶ್ ಅಂಬಾನಿ ಅವರು ಸಾಳ್ವೆ ಅವರಿಗೆ 15ಕೋಟಿ ರು ನೀಡಿದ್ದರು ಎಂಬ ಸುದ್ದಿಯೂ ಇದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications