ಸಲ್ಮಾನ್ ರನ್ನು ಜೈಲಿಗೆ ಕಳಿಸಿದ ಹೀರೋ ಈ ಬಾಡಿಗಾರ್ಡ್
ಮುಂಬೈ, ಮೇ. 6 : "ಲ್ಯಾಂಡ್ ರೋವರ್ ಸ್ಟೇರಿಂಗ್ ಹಿಂದೆ ಇದ್ದದ್ದು ಸಲ್ಮಾನ್ ಖಾನ್ ಅವರೇ" ಎಂದು ಸಾಯುವ ಕಡೆ ಘಳಿಗೆಯವರೆಗೆ ಹೇಳುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್, ಸಲ್ಮಾನ್‌ನ ಮಾಜಿ ಬಾಡಿಗಾರ್ಡ್ ರವೀಂದ್ರ ಪಾಟೀಲ್ ಆತ್ಮ ಈಗ ನಿಟ್ಟುಸಿರು ಬಿಟ್ಟಿರಬಹುದು.
ಮುಂಬೈನ ಸೆಷನ್ಸ್ ಕೋರ್ಟ್, 2002ರ ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಸಲ್ಮಾನ್ ಖಾನ್‌ರನ್ನು ಶಿಕ್ಷೆಗೆ ಗುರಿಪಡಿಸಿ ಹದಿಮೂರು ವರ್ಷಗಳ ನಂತರ ಮೇ 6ರಂದು ತೀರ್ಪು ಪ್ರಕಟಿಸಿದೆ. ಈ ಘಟನೆಯಲ್ಲಿ ಓರ್ವ ಪಾದಚಾರಿ ಸತ್ತು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದರು. [ಸೆಷನ್ಸ್ ಕೋರ್ಟ್ ನೀಡಿದ್ದ ಶಿಕ್ಷೆ ಅಮಾನತು]
2002ನೇ ಇಸ್ವಿ ಸೆಪ್ಟೆಂಬರ್ 28ರಂದು ಮಧ್ಯರಾತ್ರಿಯಲ್ಲಿ ಪಾದಚಾರಿಗಳ ಮೇಲೆ ಸಲ್ಮಾನ್ ಖಾನ್ ಕಾರನ್ನು ಹರಿಸಿದಾಗ, ಸಲ್ಮಾನ್‌ನ ಬಾಡಿಗಾರ್ಡ್ ಆಗಿ ನಿಯೋಜಿತಗೊಂಡಿದ್ದ ರವೀಂದ್ರ ಪಾಟೀಲ್ ನಟನ ಪಕ್ಕದಲ್ಲೇ ಕುಳಿತಿದ್ದರು. ನೇರ ಸಾಕ್ಷಿಯಾಗಿದ್ದ ರವೀಂದ್ರ ಈ ಪ್ರಕರಣದಲ್ಲಿ ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ. [ಗುದ್ದೋಡು ಪ್ರಕರಣ, ಸಲ್ಮಾನ್ ದೋಷಿ]

ಅಂಡರ್‌ವರ್ಲ್ಡ್‌ನಿಂದ ಬೆದರಿಕೆ ಇದ್ದಿದ್ದರಿಂದ ಸಲ್ಮಾನ್ ಖಾನ್ ಬಾಡಿಗಾರ್ಡ್ ಆಗಿದ್ದ ರವೀಂದ್ರ, ಆ ಕರಾಳ ರಾತ್ರಿ, 'ನೀವು ಕುಡಿದಿದ್ದೀರಿ ಕಾರನ್ನು ನಿಧಾನವಾಗಿ ಓಡಿಸಿ' ಎಂದು ಹೇಳುತ್ತಲೇ ಇದ್ದರು. ಪಾಟೀಲರ ಮಾತನ್ನು ಕಿವಿಗೆ ಹಾಕಿಕೊಳ್ಳದ ಸಲ್ಮಾನ್ ಪಾದಚಾರಿಗಳ ಮೇಲೆ ಕಾರನ್ನು ಏರಿಸಿಬಿಟ್ಟಿದ್ದರು.
ನಂತರ ಸಲ್ಮಾನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಕೂಡ ಇದೇ ರವೀಂದ್ರ ಪಾಟೀಲ್. ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಪಾಟೀಲ್ ಮೇಲೆ ಭಾರೀ ಒತ್ತಡ ಹೇರಲಾಗಿತ್ತು. ವಕೀಲರು ಮತ್ತು ಪೊಲೀಸರ ಒತ್ತಡ, ಹಿಂಸೆಯನ್ನು ತಾಳಲಾರದೆ ರವೀಂದ್ರ ಕೆಲಕಾಲ ಭೂಗತರಾಗಿದ್ದರು. ಕೋರ್ಟಿಗೆ ಹಾಜರಾಗದ್ದರಿಂದ ಅವರನ್ನು ಬಂಧಿಸಲಾಗಿತ್ತು. [ಸಲ್ಮಾನ್ ಗೆ ರಕ್ಷಣೆ ನೀಡಿದ ಬೀಯಿಂಗ್ ಹ್ಯೂಮನ್]
ಕ್ಷಯರೋಗದಿಂದ ಬಳಲುತ್ತಿದ್ದ ರವೀಂದ್ರ ಪಾಟೀಲ್ ತಮ್ಮ ಕುಟುಂಬದಿಂದಲೇ ಪರಿತ್ಯಕ್ತರಾಗಿದ್ದರು ಮತ್ತು 2007ರ ಸೆಪ್ಟೆಂಬರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅಕ್ಟೋಬರಲ್ಲಿ ಅವರು ಕೊನೆಯುಸಿರೆಳೆದರು.
ಸಾಯುವ ಎರಡು ದಿನಗಳ ಹಿಂದೆ ಕೂಡ ರವೀಂದ್ರ ಅವರು, ಸಲ್ಮಾನ್ ಖಾನ್ ಅವರೇ ಅಪರಾಧಿ ಎಂದು ಪದೇ ಪದೇ ಹೇಳುತ್ತಿದ್ದರೆಂದು ಅವರ ಸ್ನೇಹಿತ ಹೇಳಿದ್ದಾರೆ. ಸಲ್ಮಾನ್ ವಿರುದ್ಧದ ತೀರ್ಪು ಅಪಘಾತದಲ್ಲಿ ಮಡಿದ ಪಾದಚಾರಿಗೆ ಮಾತ್ರವಲ್ಲ, ನಟನ ವಿರುದ್ಧ ಎಫ್ಐಆರ್ ದಾಖಲಿಸಿದ್ದ ರವೀಂದ್ರ ಪಾಟೀಲರಿಗೂ ಸಂದ ಜಯ. [ಎಲುಬಿಲ್ಲದ ನಾಲಿಗೆಯ ಅಭಿಜಿತ್]












Click it and Unblock the Notifications