ಬೆಂಗಳೂರಿನಲ್ಲಿ ಹೊರ ರಾಜ್ಯದ ಬೈಕ್-ಟ್ಯಾಕ್ಸಿಗಳ ಹಾವಳಿ: ಸಂಚಾರ ಸುರಕ್ಷತೆಗೆ ಕುತ್ತು! ಬೇಕಿದೆ ಹೊಸ ನಿಯಮಗಳು
ಬೆಂಗಳೂರು: ಐಟಿ ಕೇಂದ್ರ ಬೆಂಗಳೂರಿನಲ್ಲಿ ಮೊದಲೇ ಸಂಚಾರ ದಟ್ಟಣೆ ವಿಪರೀತವಾಗಿ, ನಿತ್ಯವು ಕಿರಿ ಕಿರಿ ಉಂಟಾಗುತ್ತಿದೆ. ನಗರದ ರಸ್ತೆಗಳಲ್ಲಿ ಕರ್ನಾಟಕದ ಹೊರಗಿನ ನೋಂದಣಿ ಹೊಂದಿರುವ ದ್ವಿಚಕ್ರ ವಾಹನಗಳು ಸಾರಿಗೆ ಆಪ್‌ಗಳ ಮೂಲಕ ಬೈಕ್ ಟ್ಯಾಕ್ಸಿಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಇದು ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಬೆಂಗಳೂರು ಟ್ರಾಫಿಕ್ ಗೆ ಪರಿಹಾರವಾಗಿರುವ ಈ ಬೈಕ್ ಟ್ಯಾಕ್ಸಿಗಳ ನಿಯಂತ್ರಣಕ್ಕೆ ರಾಜ್ಯ ಸಾರಿಗೆ ಇಲಾಖೆಯು ಸೂಕ್ತ ನಿಯಮಾವಳಿಗಳನ್ನು ರೂಪಿಸದೇ ಇರುವುದು ಈ ಗೊಂದಲಕ್ಕೆ ಮತ್ತು ಸುರಕ್ಷತೆಯ ಭೀತಿಗೆ ಮುಖ್ಯ ಕಾರಣವಾಗಿದೆ.
ಹೊರ ರಾಜ್ಯಗಳ ನೋಂದಣಿ ಸಂಖ್ಯೆ ಹೊಂದಿರುವ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವಾಗ ಅಪಘಾತ ಅಥವಾ ಕಾನೂನುಬಾಹಿರ ಘಟನೆಗಳು ಸಂಭವಿಸಿದರೆ, ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆ ಮೂಡಿದೆ. ಸ್ಥಳೀಯ ನಿವಾಸಿಗಳು ಮತ್ತು ನಿತ್ಯ ಪ್ರಯಾಣಿಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನಿಯಮಾವಳಿಗಳ ಕೊರತೆಯು ಅಪರಾಧ ಹಾಗೂ ಸುರಕ್ಷತಾ ಅಪಾಯಗಳನ್ನು ಹೆಚ್ಚಿಸಬಹುದು ಎಂದು ಎಚ್ಚರಿಸಿದ್ದಾರೆ.

ಹೊರ ರಾಜ್ಯಗಳ ವಾಹನಗಳಿಗೆ ನಿಯಮ ಏಕೆ ಅನ್ವಯಿಸಲ್ಲ?
ಬೆಂಗಳೂರಿನ ಹೊರ ವಲಯ ಪ್ರದೇಶಗಳಾದ ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಕೋರಮಂಗಲದಂತಹ ಐಟಿ ವಲಯದ ನಿವಾಸಿಗಳು ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಯಮಿತವಾಗಿ ಬಳಸುತ್ತಿದ್ದಾರೆ. ಸಾಮಾನ್ಯ ಕ್ಯಾಬ್‌ಗಳಂತೆ ಹೊರರಾಜ್ಯಗಳ ವಾಣಿಜ್ಯ ವಾಹನಗಳಿಗೆ ಇರುವ ಪರವಾನಗಿ ನಿಯಮಗಳು ಬೈಕ್ ಟ್ಯಾಕ್ಸಿಗಳಿಗೆ ಏಕೆ ಅನ್ವಯಿಸುತ್ತಿಲ್ಲ ಎಂದು ಸ್ಥಳಿಯರು ಪ್ರಶ್ನಿಸುತ್ತಿದ್ದಾರೆ. ಅಪಘಾತ ಸಂಭವಿಸಿದರೆ ವಿಮೆ ಕ್ಲೈಮ್ ಮಾಡುವುದು ಹಾಗೂ ತನಿಖೆಯ ಹಂತದಲ್ಲಿ ಹೊರ ರಾಜ್ಯಗಳ ವಾಹನಗಳ ಮಾಲೀಕರನ್ನು ಪತ್ತೆ ಹಚ್ಚುವುದು ಸವಾಲಾಗಲಿದೆ.
ಹೈಕೋರ್ಟ್ ಸೂಚಿಸಿದರೂ ಸರ್ಕಾರ ವಿಫಲ
ಕರ್ನಾಟಕ ಹೈಕೋರ್ಟ್ ಈ ಹಿಂದೆ ಬೈಕ್ ಟ್ಯಾಕ್ಸಿಗಳ ಮೇಲಿನ ಸಂಪೂರ್ಣ ನಿಷೇಧವನ್ನು ರದ್ದುಗೊಳಿಸಿತ್ತು. ಅವುಗಳ ಕಾರ್ಯಾಚರಣೆಗೆ ಪರವಾನಗಿ ಚೌಕಟ್ಟು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದೇ ವಿಚಾರವಾಗಿ ಸರ್ಕಾರದ ಕಾನೂನು ಹೋರಾಟಗಳು ಮತ್ತು ವಿಳಂಬ ಧೋರಣೆಯಿಂದಾಗಿ ಇಂದಿಗೂ ಯಾವುದೇ ಸ್ಪಷ್ಟ ಮಾರ್ಗಸೂಚಿಗಳು ಜಾರಿಗೆ ಬರಲಿಲ್ಲ. ತಿಂಗಳುಗಳ ಬಳಿಕ ಈ ಕುರಿತು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡುತ್ತಿದ್ದಂತೆ ನಿಷೇಧವನ್ನು ಕೊರ್ಟ್ ರದ್ದುಗೊಳಿಸಿತು. ಪರಿಣಾಮವಾಗಿ, ಆಪ್ ಆಧಾರಿತ ಕಂಪನಿಗಳು ಯಾವುದೇ ಅಡೆತಡೆಯಿಲ್ಲದೆ ಹೊರರಾಜ್ಯಗಳ ವಾಹನಗಳನ್ನು ಬಳಸಿಕೊಳ್ಳುತ್ತಿವೆ. ಇದರಿಂದ ಕಾನೂನು ಅಪಾಯ ಎದುರಾಗುವ ಸಾಧ್ಯತೆಗಳು ಇವೆ ಎಂಬುದನ್ನು ಮರೆಯಬಾರದು.
ಸಾರಿಗೆ ಇಲಾಖೆಯ ಮುಂದಿನ ಸವಾಲುಗಳು
ರಾಜ್ಯಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ನಿಯಮಾವಳಿಗಳು ಸದ್ಯಕ್ಕೆ ಲಭ್ಯವಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇತ್ತೀಚಿನ ಪರಾಮರ್ಶನಾ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬಂದಿದೆ. ಆದರೆ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಕುರಿತು ಆಪ್ ಸಂಸ್ಥೆಗಳು ಪ್ರತಿಕ್ರಿಯಿಸಿಲ್ಲ.
ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಕೊನೆಯ ಮೈಲಿ ಸಂಪರ್ಕ ಕಲ್ಪಿಸುವಲ್ಲಿ ಬೈಕ್ ಟ್ಯಾಕ್ಸಿಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ, ತಂತ್ರಜ್ಞಾನ ಆಧಾರಿತ ಈ ಸೇವೆಗಳು ಸಾರ್ವಜನಿಕರ ಜೀವಕ್ಕೆ ಕುತ್ತು ತರದಂತೆ ನೋಡಿಕೊಳ್ಳಲು ಸರ್ಕಾರವು ಶೀಘ್ರವೇ ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಜಾರಿಗೆ ತರಬೇಕಾದ ತುರ್ತು ಅಗತ್ಯವಿದೆ. ಇಲ್ಲವಾದರೆ ಹೊರ ರಾಜ್ಯದ ವಾಹನಗಳು ಹೆಚ್ಚಾಗಬಹುದು, ಅಪರಾಧದಲ್ಲಿ, ಅಪಘಾತ ಪ್ರಕರಣದಲ್ಲಿ ಹೊರ ರಾಜ್ಯಗಳ ವಾಹನಗಳ ಮಾಲೀಕರ ಪತ್ತೆ ಕಷ್ಟವಾಗಬಹುದು. ತನಿಖೆಗಳು ವಿಳಂಬ ಸೇರಿದಂತೆ ಇನ್ನಿತರ ಸವಾಲುಗಳು ಎದುರಾಗಬಹುದು. ಆದ್ದರಿಂದ ಸರ್ಕಾರ ಇನ್ನಾದರೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.













Click it and Unblock the Notifications