Mekhri Circle: ರಾಂಗ್‌ ರೂಟ್‌ನಲ್ಲಿ ಬಂದ ಟಿಟಿ ಗಾಡಿ, ಯಾಕಪ್ಪ ಅಂದಿದ್ದಕ್ಕೆ ನೀನ್ಯಾರೋ ಕೇಳೋಕೆ ಅಂತ ಹೀಗಾ ಮಾಡೋದು!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮತ್ತು ರೋಡ್ ರೇಜ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಗೆ ಕುತ್ತು ತರುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ನಗರದ ಪ್ರಮುಖ ಜಂಕ್ಷನ್‌ ಆದ ಮೇಖ್ರಿ ಸರ್ಕಲ್‌ನಲ್ಲಿ (Mekhri Circle) ಇಂತದ್ದೇ ಘಟನೆಯೊಂದು ನಡೆದಿದೆ. ರಾಂಗ್‌ ರೂಟ್‌ನಲ್ಲಿ ವಾಹನ ಚಲಾಯಿಸುವುದನ್ನು ಪ್ರಶ್ನಿಸಿದ ಕಾರು ಚಾಲಕನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಘಟನೆಯ ವಿವರ

ನಗರದ ಮೇಖ್ರಿ ಸರ್ಕಲ್ ರಸ್ತೆಯಲ್ಲಿ KA01AG1283 ನೋಂದಣಿ ಸಂಖ್ಯೆಯ ಟಿಟಿ ವಾಹನವೊಂದು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ, ಅತ್ಯಂತ ಅಪಾಯಕಾರಿ ರೀತಿಯಲ್ಲಿ ರಾಂಗ್‌ ರೂಟ್‌ನಲ್ಲಿ ಚಲಿಸುತ್ತಿತ್ತು. ಇದು ಎದುರಿನಿಂದ ಬರುತ್ತಿದ್ದ ಇತರ ವಾಹನ ಸವಾರರ ಪ್ರಾಣಕ್ಕೆ ತೀವ್ರ ಉಂಟುಮಾಡುವಂತಿತ್ತು. ಈ ಬೇಜವಾಬ್ದಾರಿ ಚಾಲನೆಯನ್ನು ಗಮನಿಸಿದ ಕಾರು ಚಾಲಕನೊಬ್ಬ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿ, ನಿಯಮ ಪಾಲಿಸುವಂತೆ ಆ ಚಾಲಕನಿಗೆ ತಿಳಿಸಿದ್ದಾರೆ.

Mekhri Circle

ಪ್ರಶ್ನಿಸಿದ್ದಕ್ಕೆ ಸಿಟ್ಟಾದ ಚಾಲಕನಿಂದ ಅಟ್ಯಾಕ್

ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲಿಗೆ ಉದ್ಧಟತನ ಪ್ರದರ್ಶಿಸಿದ ಟಿಟಿ ಚಾಲಕ, ತಕ್ಷಣವೇ ವಾಹನದಿಂದ ಕೆಳಗಿಳಿದು ಕಾರು ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ನಡೆದ ಈ ಗೂಂಡಾವರ್ತನೆ ಸ್ಥಳದಲ್ಲಿದ್ದ ಇತರ ವಾಹನ ಸವಾರರನ್ನು ಆತಂಕಕ್ಕೀಡುಮಾಡಿದೆ. ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಈ ಇಡೀ ಕೃತ್ಯದ ದೃಶ್ಯ ಲೈವ್ ಆಗಿ ಸೆರೆಯಾಗಿವೆ. ಆರೋಪಿ ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದು ಹಾಗೂ ಸವಾರನ ಮೇಲೆ ಹಲ್ಲೆ ನಡೆಸಿರುವ ಸಂಪೂರ್ಣ ಸಾಕ್ಷ್ಯಗಳು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಈ ಡಿಜಿಟಲ್ ಸಾಕ್ಷ್ಯವು ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಪ್ರಮುಖ ಅಸ್ತ್ರವಾಗಿದೆ.

ಆರ್‌.ಟಿ. ನಗರ ಠಾಣೆಯಲ್ಲಿ ದೂರು ದಾಖಲು

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಕಾರು ಚಾಲಕ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಬೆಂಗಳೂರಿನ ಆರ್‌.ಟಿ.ನಗರ (RT Nagar) ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರನ್ನು ದಾಖಲಿಸಿದ್ದಾರೆ. ಹಲ್ಲೆಯ ವಿಡಿಯೋ ಸಾಕ್ಷ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿ, ರೌಡಿಸಂ ಪ್ರದರ್ಶಿಸಿದ ಚಾಲಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ತಕ್ಷಣವೇ ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಘಟನೆಯ ತನಿಖೆಯನ್ನು ಚುರುಕುಗೊಳಿಸುವಂತೆ ಬೆಂಗಳೂರು ನಗರ ಪೊಲೀಸ್ ಮತ್ತು ಸಂಚಾರಿ ಪೊಲೀಸರಿಗೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಪೊಲೀಸರಿಗೂ ತಪ್ಪದ ಇಕ್ಕಟ್ಟು

ಸಿಲಿಕಾನ್ ಸಿಟಿಯ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಮೇಖ್ರಿ ಸರ್ಕಲ್ ಜಂಕ್ಷನ್‌ನಲ್ಲಿ ಪೀಕ್ ಅವರ್‌ಗಳ ಟ್ರಾಫಿಕ್ ಜಾಮ್ ಸಮಸ್ಯೆ ಈಗ ಮಿತಿಮೀರಿದೆ. ಕಚೇರಿ ಹಾಗೂ ಶಾಲಾ-ಕಾಲೇಜುಗಳ ಅವಧಿಯಲ್ಲಿ ಈ ವೃತ್ತದ ನಾಲ್ಕೂ ಮಾರ್ಗಗಳಲ್ಲಿ ಕನಿಷ್ಠ ಅರ್ಧ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ.

ಕಂಟೋನ್ಮೆಂಟ್ ಕಡೆಯಿಂದ ಮೇಖ್ರಿ ಸರ್ಕಲ್‌ಗೆ ಬರುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಬಿಸಿ ಜೆಸಿ ನಗರದ ಟಿವಿ ಟವರ್‌ವರೆಗೂ ತಟ್ಟುತ್ತಿದ್ದು, ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಲ್ಲುತ್ತವೆ. ರಸ್ತೆಗಳು ಕಿರಿದಾಗಿರುವುದು ಮತ್ತು ವಾಹನಗಳ ಸಂಖ್ಯೆ ದುಪ್ಪಟ್ಟಾಗಿರುವುದು ಈ ಭಾಗದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಐಟಿ ಮಂದಿಗೆ ತಪ್ಪದ ಟ್ರಾಫಿಕ್ ನರಕ: ನಮ್ಮ ಮೆಟ್ರೋ ಬ್ಲೂ ಲೈನ್ ಕಾಮಗಾರಿ ಮತ್ತೆ ವಿಳಂಬ
ಐಟಿ ಮಂದಿಗೆ ತಪ್ಪದ ಟ್ರಾಫಿಕ್ ನರಕ: ನಮ್ಮ ಮೆಟ್ರೋ ಬ್ಲೂ ಲೈನ್ ಕಾಮಗಾರಿ ಮತ್ತೆ ವಿಳಂಬ

ಸಂಚಾರ ನಿಯಂತ್ರಣಕ್ಕಾಗಿ ಅಳವಡಿಸಲಾಗಿರುವ ಇತ್ತೀಚಿನ ಆಧುನಿಕ ಸಿಗ್ನಲ್ ವ್ಯವಸ್ಥೆಯು ಈ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ವರ್ಕ್ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಸ್ಮಾರ್ಟ್ ಸಿಗ್ನಲ್‌ಗಳು ಕೇವಲ ಕೆಲವೇ ನಿಮಿಷಗಳ ಕಾಲ ಮಾತ್ರ ಹಸಿರು ದೀಪವನ್ನು ಬಿಡುವುದರಿಂದ ನೂರಾರು ಸಂಖ್ಯೆಯಲ್ಲಿ ನಿಂತಿರುವ ವಾಹನಗಳು ಜಂಕ್ಷನ್ ದಾಟುವ ಮೊದಲೇ ಮತ್ತೆ ರೆಡ್ ಸಿಗ್ನಲ್ ಬೀಳುತ್ತಿದೆ. ಇದು ವಾಹನಗಳ ಸರತಿಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಈ ಕಿರಿದಾದ ಮಾರ್ಗದಲ್ಲಿ ಹೇಗಾದರೂ ಮಾಡಿ ಟ್ರಾಫಿಕ್ ದಟ್ಟಣೆಯನ್ನು ತಗ್ಗಿಸಲೇಬೇಕು ಎಂದು ಸಂಚಾರಿ ಪೊಲೀಸರು, ಪೀಕ್ ಅವರ್‌ಗಳಲ್ಲಿ ಸಿಗ್ನಲ್‌ ಬಿಟ್ಟಾಗ ಎರಡೂ ಮಾರ್ಗಗಳಲ್ಲಿ ಏಕಮುಖ ಸಂಚಾರಕ್ಕೆ ಪೊಲೀಸರೇ ಸ್ವತಃ ಅನುವು ಮಾಡಿಕೊಡುತ್ತಿದ್ದಾರೆ.

ಆದರೆ, ಈ ನಿಯಮ ಕೆಲವೊಮ್ಮೆ ಉಲ್ಟಾ ಹೊಡೆಯುತ್ತಿದೆ. ಪೊಲೀಸರ ಸಮ್ಮತಿಯೊಂದಿಗೆ ಒನ್-ವೇನಲ್ಲಿ ನುಗ್ಗುವ ವಾಹನಗಳಿಂದಾಗಿ, ಎದುರು ಮಾರ್ಗದಿಂದ ಬರುವ ವಾಹನಗಳಿಗೆ ತೊಂದರೆಯಾಗುತ್ತಿರುವುದಂತೂ ಸತ್ಯ. ಇದು ರಸ್ತೆಯಲ್ಲಿ ಗೊಂದಲ ಮತ್ತು ಸಣ್ಣಪುಟ್ಟ ಅಪಘಾತಗಳಿಗೂ ಕಾರಣವಾಗುತ್ತಿದೆ.

ಒಂದೆಡೆ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲೇಬೇಕಾದ ಅನಿವಾರ್ಯತೆ, ಮತ್ತೊಂದೆಡೆ ಏಕಮುಖ ಸಂಚಾರಕ್ಕೆ ಬಿಟ್ಟಾಗ ಎದುರಾಗುವ ಸಾರ್ವಜನಿಕರ ಆಕ್ರೋಶ ಹಾಗೂ ಸುರಕ್ಷತೆಯ ಪ್ರಶ್ನೆ ಇವೆರಡರ ನಡುವೆ ಸಂಚಾರಿ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ದೀರ್ಘಕಾಲದ ಸಮಸ್ಯೆಗೆ ಫ್ಲೈಓವರ್ ನಿರ್ಮಾಣ ಅಥವಾ ರಸ್ತೆ ಅಗಲೀಕರಣವೇ ಪರಿಹಾರ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+