ಎರಡೇ ಸಾಲಿನ ರಾಜೀನಾಮೆ ಪತ್ರ :ಸಿಂಪಲ್ ಇಮೇಲ್‌ಗೆ ಮ್ಯಾನೇಜರ್‌ನಿಂದ ಅಷ್ಟೇ ಸುಂದರ ಪ್ರತಿಕ್ರಿಯೆ, ಹೃದಯ ಗೆದ್ದ ಲೀಡರ್‌ಶಿಪ್ ಗುಣ!
ಉದ್ಯೋಗದಲ್ಲಿರುವವರು ಕೆಲಸ ಬಿಡುವುದು ಬೇರೆ ಕೆಲಸಕ್ಕೆ ಸೇರುವುದು ಸಹಜ ಪ್ರಕ್ರಿಯೆ. ಆದರೆ ಒಂದು ಕೆಲಸಕ್ಕೆ ಅಥವಾ ಕಂಪನಿಗೆ ರಾಜೀನಾಮೆ ಸಲ್ಲಿಸುವಾಗ ನಾವು ನಡೆದುಕೊಳ್ಳುವ ರೀತಿ ಬಹಳ ಮುಖ್ಯವಾಗಿರುತ್ತದೆ. ರಾಜೀನಾಮೆ ಕೊಟ್ಟ ಮಾತ್ರಕ್ಕೆ ಆ ಕಂಪನಿಯ ಜೊತೆಗಿನ ಎಲ್ಲಾ ಸಂಬಂಧಗಳನ್ನು ಮುರಿದು ಹೊರ ಬರುವುದು ಎನ್ನುವ ಅರ್ಥ ಅಲ್ಲವೇ ಅಲ್ಲ. ಉದ್ಯೋಗ ಬಿಡುವುದು ಎಂದರೆ ಕೇವಲ ಕೆಲಸಕ್ಕೆ ವಿದಾಯ ಹೇಳುವುದಷ್ಟೇ ಅಲ್ಲ, ಅದು ವೃತ್ತಿಪರ ಬಾಂಧವ್ಯಕ್ಕೆ ಇಡುವ ಅತ್ಯಂತ ದೊಡ್ಡ ಪರೀಕ್ಷೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇಮೇಲ್ ಸಂಭಾಷಣೆಯೊಂದು ಕಾರ್ಪೊರೇಟ್ ಜಗತ್ತಿಗೆ ನಾಯಕತ್ವದ ಕುರಿತು ಅತ್ಯಂತ ದೊಡ್ಡ ಪಾಠವೊಂದನ್ನು ಕಲಿಸಿದೆ.
ಸಾಮಾನ್ಯವಾಗಿ ಉದ್ಯೋಗಿಗಳು ಸಂಸ್ಥೆ ಬಿಡುವಾಗ ಕಂಪನಿ ಅಥವಾ ತನ್ನ ಮೇಲಾಧಿಕಾರಿ ಜೊತೆಗಿನ ಅಸಮಾಧಾನ, ವೈಮನಸ್ಸು, ದೂರುಗಳನ್ನು ಪುಟಗಟ್ಟಲೆ ಬರೆಯುತ್ತಾರೆ. ಅಥವಾ ದೀರ್ಘವಾದ ಭಾವನಾತ್ಮಕ ಸಂದೇಶಗಳನ್ನು ಬರೆಯುವುದೂ ಇದೆ. ಇದಕ್ಕೆ ವಿರುದ್ಧವಾಗಿ ಇದೀಗ ರಾಜೀನಾಮೆ ಸಲ್ಲಿಸುವಾಗ ಉದ್ಯೋಗಿಯೊಬ್ಬರು ಬರೆದಿರುವ ಇಮೇಲ್ ಎಲ್ಲೆಡೆ ವೈರಲ್ ಆಗುತ್ತಿದೆ.

ರಾಜೀನಾಮೆ ಪತ್ರದಲ್ಲಿ ಇದ್ದದ್ದು ಕೇವಲ ಎರಡೇ ಸಾಲು:
"ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಎಲ್ಲದ್ದಕ್ಕೂ ಧನ್ಯವಾದಗಳು."ಎನ್ನುವ ಎರಡೇ ಸಾಲಿನ ರಾಜೀನಾಮೆ ಪತ್ರವನ್ನು ಉದ್ಯೋಗಿಯೊಬ್ಬರು ಇಮೇಲ್ ಮೂಲಕ ಕಳುಹಿಸಿದ್ದಾರೆ. ಇಲ್ಲಿ
ಯಾವುದೇ ದೂರು-ದುಮ್ಮಾನಗಳಿಲ್ಲ, ವೈರತ್ವವಿಲ್ಲ, ದ್ವೇಷ ಭಾವನೆಯಿಲ್ಲ. ಕೇವಲ ಕೃತಜ್ಞತೆ ಮತ್ತು ಗೌರವದಿಂದ ಕೂಡಿದ ಈ ಸರಳ ಸಂದೇಶವಷ್ಟೇ. ಈ ರಾಜೀನಾಮೆ ಪತ್ರ ಎಲ್ಲರ ಗಮನ ಸೆಳೆದಿದೆ.
ಮ್ಯಾನೇಜರ್ ಪ್ರತಿಕ್ರಿಯೆ ಕೂಡಾ ಅಷ್ಟೇ ಸುಂದರ :
ಈ ಇಮೇಲ್ ಸಂಭಾಷಣೆ ಇಷ್ಟೊಂದು ವೈರಲ್ ಆಗಲು ಕಾರಣ ಕೇವಲ ಆ ಉದ್ಯೋಗಿಯ ರಾಜೀನಾಮೆ ಪತ್ರವಲ್ಲ.ಬದಲಿಗೆ ಅದಕ್ಕೆ ಆತನ ಮ್ಯಾನೇಜರ್ ನೀಡಿದ ಮರು-ಉತ್ತರ. ರಾಜೀನಾಮೆ ಎಷ್ಟು ಸರಳವಾಗಿತ್ತೋ ಅಷ್ಟೇ ಸುಂದರವಾಗಿತ್ತು ಮ್ಯಾನೇಜರ್ ನೀಡಿರುವ ಉತ್ತರ.
ಸಾಮಾನ್ಯವಾಗಿ ರಾಜೀನಾಮೆ ಪತ್ರಗಳಿಗೆ ಯಾಂತ್ರಿಕವಾಗಿ ಅಥವಾ ಕಟುವಾಗಿ ಪ್ರತಿಕ್ರಿಯಿಸುವ ಇಂದಿನ ಕಾರ್ಪೊರೇಟ್ ಸಂಸ್ಕೃತಿಗೆ ಭಿನ್ನವಾಗಿ, ಆ ಮ್ಯಾನೇಜರ್ ಅತ್ಯಂತ ಆಪ್ತತೆಯಿಂದ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೆ, "ಭವಿಷ್ಯದಲ್ಲಿ ನೀವು ಯಾವತ್ತಾದರೂ ಮತ್ತೆ ಈ ಕಂಪನಿಗೆ ವಾಪಸ್ ಬರಬೇಕು ಅಂದಕೊಂಡರೆ ಈ ಸಂಸ್ಥೆಯ ಬಾಗಿಲು ನಿಮಗಾಗಿ ಸದಾ ತೆರೆದಿರುತ್ತದೆ ಎಂದು ಹಾರೈಸಿದ್ದಾರೆ.
ಮ್ಯಾನೇಜ್‌ಮೆಂಟ್ ಮತ್ತು ಲೀಡರ್‌ಶಿಪ್ ನಡುವಿನ ವ್ಯತ್ಯಾಸ :
ಈ ಒಂದು ಘಟನೆ ಸಾಮಾನ್ಯ ಮ್ಯಾನೇಜರ್ ಹಾಗೂ ಒಬ್ಬ ಶ್ರೇಷ್ಠ ನಾಯಕನ ನಡುವಿನ ವ್ಯತ್ಯಾಸವನ್ನು ಬಿಚ್ಚಿಟ್ಟಿದೆ. ಒಬ್ಬ ಉತ್ತಮ ನಾಯಕ, ಉದ್ಯೋಗಿ ತನ್ನ ಸಂಸ್ಥೆಯಲ್ಲಿದ್ದಾಗ ಮಾತ್ರ ಆತನ ಜೊತೆಗಿರುವುದಲ್ಲ, ಬದಲಾಗಿ ಆತ ತನ್ನ ಒಳಿತನ್ನು ನೋಡಿಕೊಂಡು ಬೇರೆ ದಾರಿ ಆಯ್ದುಕೊಂಡಾಗಲೂ ಅಷ್ಟೇ ಗೌರವದಿಂದ ನಡೆಸಿಕೊಳ್ಳುತ್ತಾನೆ. ಒಳ್ಳೆಯದೇ ಆಗಲಿ ಎಂದು ಹರಸುತ್ತಾನೆ.
ಇತ್ತೀಚಿನ ದಿನಗಳಲ್ಲಿ ಕಚೇರಿ ವಾತಾವರಣ ತೀರಾ ಹದಗೆಡುತ್ತಿದ್ದು, ಸಂಬಂಧವನ್ನು ಮುುುರಿದುಕೊಂಡು ಉದ್ಯೋಗಿಗಳು ಹೊರ ಬರುತ್ತಿರುವುದೇ ಹೆಚ್ಚು. ಇಂಥಹ ಸ್ಥಿತಿಯಲ್ಲಿ ಈ ಇಮೇಲ್ ಸಂಭಾಷಣೆ ಎಲ್ಲರ ಕಣ್ತೆರೆಸುವುದಂತೂ ಸತ್ಯ.
ಕಂಪನಿಯಿಂದ ಹೊರಗೆ ಹೇಗೆ ಬರುತ್ತೀರಿ ಎನ್ನುವುದು ಕೂಡಾ ಅಷ್ಟೇ ಮುಖ್ಯ:
ರಾಜೀನಾಮೆ ಎನ್ನುವುದು ಒಂದು ಕಹಿ ಘಟನೆಯೇ ಆಗಬೇಕೆಂದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೆಲವು ಗೌರವಾನ್ವಿತ ವಿದಾಯಗಳು ನಂಬಿಕೆ ಮತ್ತು ಸದ್ಭಾವನೆಯ ದೊಡ್ಡ ಪರಂಪರೆಯನ್ನೇ ಸೃಷ್ಟಿಸುತ್ತವೆ.
ಉದ್ಯೋಗಿಗಳು ಸಂಸ್ಥೆಯನ್ನು ಬಿಟ್ಟು ಹೊರಬಹುದು, ಆದರೆ ತಮ್ಮ ವೃತ್ತಿಜೀವನದ ಪ್ರಮುಖ ಕ್ಷಣಗಳಲ್ಲಿ ಸಂಸ್ಥೆ ತಮ್ಮನ್ನು ಹೇಗೆ ನಡೆಸಿಕೊಂಡಿತು ಎಂಬುದನ್ನು ಅವರು ಎಂದಿಗೂ ಮರೆಯುವುದಿಲ್ಲ. ಇದೇ ಕಾರಣಕ್ಕೆ, ಇಂದಿನ ಯಶಸ್ವಿ ಸಂಸ್ಥೆಗಳು ಕೇವಲ ಹೊಸ ಉದ್ಯೋಗಿಗಳನ್ನು ಬರಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ, ಸಂಸ್ಥೆಯಿಂದ ಹೊರಹೋಗುವ ಪ್ರಕ್ರಿಯೆಯನ್ನು ಅರ್ಥಪೂರ್ಣವಾಗಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications