ಮುಂಬೈನಿಂದ ತೆಲಂಗಾಣಕ್ಕೆ ಸತತ 7 ವಾರಗಳ ವೀಕೆಂಡ್ ಪ್ರಯಾಣ: ಹಳ್ಳಿಗಳ ಒಡಲು ತಣಿಸಲು ಐಆರ್‌ಎಸ್ ಅಧಿಕಾರಿ ಭಗೀರಥ ಪ್ರಯತ್ನ
ಮಳೆಯಿಲ್ಲ, ನೀರಿಲ್ಲ ಎಂದು ಪ್ರತಿ ಬಾರಿಯೂ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುವ ಬದಲು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಈ ತಂತ್ರವನ್ನು ಅಳವಡಿಸಿಕೊಂಡರೆ ನೀರಿನ ಅಭಾವ ತಲೆದೋರುವುದೇ ಇಲ್ಲ. ನೆಲಕ್ಕೆ ಬೀಳುವ ಮಳೆ ನೀರು ಚರಂಡಿಗಳಿಗೆ ಹರಿಯುವ ಬದಲು ಮತ್ತೆ ಭೂಮಿ ಸೇರುವ ಹಾಗಾದರೆ ಬೋರ್‌ವೆಲ್‌ಗಳು ಬತ್ತುವುದೇ ಇಲ್ಲ. ಜನ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುವುದೂ ಇಲ್ಲ. ನಾವಿಲ್ಲಿ ಹೇಳುತ್ತಿರುವುದು ಒಂದು ಮಹಾ ಜಲ ಕ್ರಾಂತಿಯ ಬಗ್ಗೆ.
ಒಂದು ಮಹಾ ಜಲ ಕ್ರಾಂತಿ:
ಈ ಕ್ರಾಂತಿಯ ಹರಿಕಾರ 2014ರ ಬ್ಯಾಚ್‌ನ ದಕ್ಷ ಐಆರ್‌ಎಸ್ ಅಧಿಕಾರಿ. ಪ್ರಸ್ತುತ ಆದಾಯ ತೇರಿಗೆ ಇಲಾಖೆಯ ಜಂಟಿ ಕಮಿಷನರ್ ಡಾ. ಪಿ. ಸುಧಾಕರ್ ನಾಯ್ಕ್. ಪ್ರತಿ ಶುಕ್ರವಾರ ಸಂಜೆ ಆಫೀಸ್ ಮುಗಿಯುತ್ತಿದ್ದಂತೆ ಇವರದ್ದು ಮುಂಬೈನಿಂದ ತೆಲಂಗಾಣದತ್ತ ಪ್ರಯಾಣ. ಸೋಮವಾರ ಬೆಳಗ್ಗೆ ಹೊತ್ತಿಗೆ ಮತ್ತೆ ಇನ್ಕಮ್ ಟ್ಯಾಕ್ಸ್ ಇಲಾಖೆಯ ಜಂಟಿ ಕಮಿಷನರ್ ಸೀಟಿನಲ್ಲಿ ಪ್ರತ್ಯಕ್ಷ. ಅಷ್ಟಕ್ಕೂ ಈ ವೀಕೆಂಡ್ ಟ್ರಿಪ್ ಪಾರ್ಟಿ ಅಥವಾ ರಜೆಯ ಮಜಾ ಕಳೆಯಲು ಮಾಡುತ್ತಿದ್ದ ಪ್ರಯಾಣವಲ್ಲ. ಬದಲಿಗೆ ಒಣಗಿ ಹೋಗುತ್ತಿದ್ದ ಹಳ್ಳಿಗಳ ಒಡಲನ್ನು ತಣಿಸುವ ಒಂದು ಮಹಾ ಜಲ ಕ್ರಾಂತಿಯ ಕಥೆ.

ಸತತ 7 ವಾರಗಳ ಕಾಲ ತಮ್ಮ ಕಚೇರಿಯ ಫೈಲುಗಳನ್ನು ಬದಿಗಿಟ್ಟು, ವಾರಾಂತ್ಯದಲ್ಲಿ ತೆಲಂಗಾಣಕ್ಕೆ ಪ್ರಯಾಣ ಬೆಳೆಸುತ್ತಿದ್ದರು. ಪ್ರತಿ ವಾರ ಮುಂಬಯಿಯಿಂದ ತೆಲಂಗಾಣಕ್ಕೆ ಹೋಗುತ್ತಿದ್ದ ಇವರು ತೆಲಂಗಾಣದ ಬರಪೀಡಿತ ಹಳ್ಳಿಗಳ ಸಮಸ್ಯೆಯ ಪರಿಹಾರಕ್ಕೆ ಹೆಣಗಾಡಿದ್ದಾರೆ. ಇಲ್ಲಿ ಅವರ ಏಕೈಕ ಗುರಿ ಮಳೆನೀರನ್ನು ಉಳಿಸುವುದು.
ದೊಡ್ಡ ಬದಲಾವಣೆಗೆ ಮುನ್ನುಡಿ:
ಇಷ್ಟಕ್ಕೂ ಇವರ ಈ ನಿರ್ಧಾರಕ್ಕೆ, ಓಡಾಟಕ್ಕೆ ಕಾರಣವಾಗಿದ್ದು ಒಂದು ಮಾತುಕತೆ. ಹೌದು, ಪರಿಸರವಾದಿ ಪಾಲಡುಗು ಜ್ಞಾನೇಶ್ವರ್ ಅವರ ಜೊತೆಗಿನ ಒಂದು ಸಣ್ಣ ಸಂಭಾಷಣೆ ಈ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆಯಿತು. ಮಳೆನೀರು ವ್ಯರ್ಥವಾಗಿ ಹರಿದು ಹೋಗುವ ಬದಲು, ಭೂಮಿಯ ಒಡಲು ಸೇರಬೇಕು ಎನ್ನುವ ಯೋಜನೆ ಇವರಿಬ್ಬರದ್ದಾಗಿತ್ತು.
ಜನರ ಬೆಂಬಲ ಶೂನ್ಯ ವೆಚ್ಚದ ಮಾದರಿ:
ಗ್ರಾಮಸ್ಥರು, ನರೇಗಾ ಕಾರ್ಮಿಕರು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಪೀರ್ಲಾ ತಂಡಾ, ಮುಕ್ತಾಪುರ ಮತ್ತು ಪೂಸಲಪಾಡ್ ಗ್ರಾಮಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ವಿಶೇಷವೆಂದರೆ, ಇದಕ್ಕೆ ಯಾವುದೇ ಸಿಮೆಂಟ್ ಅಥವಾ ಸ್ಟೀಲ್ ಬಳಸಿಲ್ಲ. ಕೇವಲ ಸ್ಥಳೀಯವಾಗಿ ಸಿಗುವ ಕಲ್ಲು ಮತ್ತು ಮಣ್ಣನ್ನು ಬಳಸಿ ಇಂಗುಗುಂಡಿಗಳು, ಸಣ್ಣ ಕೆರೆಗಳು ಮತ್ತು ಕಲ್ಲಿನ ಬದುಗಳನ್ನು ನಿರ್ಮಿಸಲಾಯಿತು. ಈ ಇಡೀ ಯೋಜನೆಗೆ ತಗುಲಿದ ವೆಚ್ಚ ಕೇವಲ 2 ಲಕ್ಷ ರೂಪಾಯಿಗಳು ಮಾತ್ರ.
ನಂಬಿಕೆ ಗೆಲ್ಲುವುದು ಸುಲಭವಿರಲಿಲ್ಲ:
ಜನರು ಏನೇ ಕೆಲಸ ಮಾಡಲಿ ಅದರಲ್ಲಿ ತಕ್ಷಣ ಯಶಸ್ಸು ಸಿಗಬೇಕು ಎಂದೇ ಬಯಸುತ್ತಾರೆ. ಆದರೆ ಇವರು ಹಿಡಿದ ಕೆಲಸ ಸಾಧಿಸುವುದು ಅಷ್ಟು ಸುಲಭವಾಗಿರಲಿಲ್ಲ. ಮಳೆ ನೀರು ಕೊಯ್ಲು ಯಾಕಾಗಿ ಮಾಡಬೇಕು. ಇದರಿಂದ ಆಗುವ ಪ್ರಯೋಜನಗಳೇನು ಎನ್ನುವ ಬಗ್ಗೆ ಜನರಿಗೆ ಮೊದಲು ಮನವರಿಕೆ ಮಾಡಿಕೊಡಬೇಕಾಗಿತ್ತು. ಅಂತರ್ಜಲ ಮಟ್ಟ ಹೆಚ್ಚಾದರೆ ಬೋರ್‌ವೆಲ್‌ಗಳು ದೀರ್ಘಕಾಲ ಪ್ರಯೋಜನಕಾರಿಯಾಗಿರುತ್ತವೆ, ಕೃಷಿ ಸುರಕ್ಷಿತವಾಗುತ್ತದೆ ಎನ್ನುವುದನ್ನು ಜನರಿಗೆ ತಿಳಿಸಿ ಹೇಳಲು ಬಹಳ ಸಮಯ ಬೇಕಾಯಿತು.
ಆದರೆ ತನ್ನ ಪ್ರಯತ್ನವನ್ನು ದಡ ಸೇರಿಸುವ ಸಲುವಾಗಿ ಪ್ರತಿ ವಾರ ನೂರಾರು ಕಿಲೋಮೀಟರ್ ಪ್ರಯಾಣಿಸಿ ಬರುತ್ತಿದ್ದ ಅಧಿಕಾರಿಯ ಕಳಕಳಿ ಜನರಲ್ಲಿ ನಂಬಿಕೆ ಮಾಡಿಸುವುದಕ್ಕೆ ಸಾಧ್ಯವಾಯಿತು. ಇವರ ಜೊತೆ ಮಳೆ ಕೊಯ್ಲು ಕಾರ್ಯಕ್ಕೆ ಯುವಕರು ಕೈ ಜೋಡಿಸಿದರು.
ಇದೀಗ ಮಳೆಗಾಲ ಆರಂಭವಾಗಿದೆ. ತೆಲಂಗಾಣದ ಹಳ್ಳಿ ಹಳ್ಳಿಯೂ ಮಳೆಗಾಗಿ ಕಾಯುತ್ತಿವೆ. ಈ ಬಾರಿ ಬೀಳುವ ಮಳೆಯ ಒಂದೊಂದು ಹನಿಯೂ ವ್ಯರ್ಥವಾಗುವುದಿಲ್ಲ, ಬದಲಿಗೆ ಹಳ್ಳಿಯ ನೆಲದಲ್ಲೇ ದೀರ್ಘಕಾಲ ಉಳಿಯಲಿದೆ ಎನ್ನುವ ಭರವಸೆ ಅಲ್ಲಿನ ರೈತರ ಕಣ್ಣಲ್ಲಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications