ಸಲ್ಮಾನ್ ಖಾನ್‌ಗೆ ಮಧ್ಯಂತರ ಜಾಮೀನು ಮಂಜೂರು
ಮುಂಬೈ, ಮೇ 6 : 2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ 5 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ ನಟ ಸಲ್ಮಾನ್ ಖಾನ್ ಅವರಿಗೆ ಬಾಂಬೆ ಹೈಕೋರ್ಟ್ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿದೆ. ಇದರಿಂದ ಸಲ್ಮಾನ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಬುಧವಾರ ಮಧ್ಯಾಹ್ನ 1.20ರಕ್ಕೆ ಮುಂಬೈ ಸೆಷೆನ್ಸ್ ಕೋರ್ಟ್ ಸಲ್ಮಾನ್ ಖಾನ್ ಅವರಿಗೆ 5 ವರ್ಷದ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಪರ ವಕೀಲರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. [ಸಲ್ಮಾನ್ ಶಿಕ್ಷೆ ಟ್ವಿಟ್ಟರ್ ನಲ್ಲಿ ಜನತೆ ಕೊಟ್ಟ ತೀರ್ಪೇನು?]

ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಅಭಯ್ ತಿಪ್ಸೆ ಅವರ ಏಕಸದಸ್ಯ ಪೀಠದಲ್ಲಿ ಸಲ್ಮಾನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಸಲ್ಮಾನ್ ಖಾನ್ ಪರ ಖ್ಯಾತ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು. [ಸಲ್ಮಾನ್ ತೀರ್ಪು : ಕ್ಷಣ-ಕ್ಷಣದ ಮಾಹಿತಿ]
ಮುಂಬೈ ಸೆಷನ್ಸ್ ಕೋರ್ಟ್ ಶಿಕ್ಷೆ ವಿಧಿಸುವಾಗ ನಿಖರವಾದ ಕಾರಣಗಳನ್ನು ನೀಡಿಲ್ಲ. ಆದ್ದರಿಂದ ಜಾಮೀನು ನೀಡಬೇಕು ಎಂದು ಹರೀಶ್ ಸಾಳ್ವೆ ವಾದ ಮಂಡಿಸಿದರು. ಇದನ್ನು ಪರಿಗಣಿಸಿದ ಕೋರ್ಟ್, ಎರಡು ದಿನಗಳ ಜಾಮೀನು ನೀಡಿ ವಿಚಾರಣೆಯನ್ನು ಮೇ 8ರ ಶುಕ್ರವಾರಕ್ಕೆ ಮುಂದೂಡಿತು. [ಸಲ್ಮಾನ್ ಗೆ ರಕ್ಷೆ ನೀಡಿದ 'ಬೀಯಿಂಗ್ ಹ್ಯೂಮನ್']
ಮುಂಬೈ ಸೆಷನ್ಸ್ ಕೋರ್ಟ್ ತೀರ್ಪಿನ ಪ್ರತಿ ಸಲ್ಮಾನ್ ಖಾನ್ ಪರ ವಕೀಲರಿಗೆ ದೊರಕಿರಲಿಲ್ಲ. ಇದೇ ಅಂಶದ ಆಧಾರದ ಮೇಲೆ ಹೈಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿರುವ ಹರೀಶ್ ಸಾಳ್ವೆ ಅವರು ಎರಡು ದಿನದ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಂತ್ರಿಕ ಕಾರಣದ ಹಿನ್ನಲೆಯಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.












Click it and Unblock the Notifications