ಎರಡು ಹೊತ್ತು ಊಟಕ್ಕೂ ಕಷ್ಟವಾಗಿದೆ : ಸತ್ತ ನೂರುಲ್ಲಾ ಪತ್ನಿ
ಮುಂಬೈ, ಮೇ. 7 : "ಪ್ರತಿದಿನ ಎರಡು ಹೊತ್ತು ಊಟ ಮಾಡುವುದಕ್ಕೂ ಕಷ್ಟವಾಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಲಾಗಲಿಲ್ಲ. ನನ್ನ ಮಕ್ಕಳನ್ನು ಭಾರೀ ಕಷ್ಟದಿಂದ ಬೆಳೆಸಿದ್ದೇನೆ. ಈ ಹದಿಮೂರು ವರ್ಷಗಳಲ್ಲಿ ಒಬ್ಬರೂ ನಮ್ಮನ್ನು ಭೇಟಿಯಾಗಿಲ್ಲ. ನಮಗೆ ಬೇಕಿರುವುದು ಪರಿಹಾರ ಮಾತ್ರ..."
ಹೀಗೆಂದು ಕಣ್ಣೀರಾದವರು, 2002ರ ಸೆಪ್ಟೆಂಬರ್ 28ರ ಕರಾಳ ರಾತ್ರಿ ಅಮೆರಿಕನ್ ಎಕ್ಸ್‌ಪ್ರೆಸ್ ಬೇಕರಿ ಎದುರು, ಸಲ್ಮಾನ್ ಖಾನ್ ಕುಡಿದ ಮತ್ತಿನಲ್ಲಿ ಹರಿಸಿದ ಟೊಯೊಟಾ ಲ್ಯಾಂಡ್ ಕ್ರೂಸರ್ ಚಕ್ರದಡಿ ಸಿಲುಕಿ, ಮಲಗಿದ್ದಲ್ಲೇ ಹೆಣವಾದ ಕೂಲಿ ಕಾರ್ಮಿಕ ನೂರುಲ್ಲಾ ಮೊಹಮ್ಮದ್ ಶರೀಫ್ ಹೆಂಡತಿ ಬೇಗಂ ಜಹಾನ್.
ಮೇ 6ರಂದು ಮುಂಬೈ ಸೆಷನ್ಸ್ ಕೋರ್ಟ್ ಸಲ್ಮಾನ್ ಖಾನ್‌ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು ನೂರುಲ್ಲಾ ಕುಟುಂಬಕ್ಕೆ ಸಂತಸವನ್ನೂ ತಂದಿಲ್ಲ, ದುಃಖವನ್ನೂ ತಂದಿಲ್ಲ. ದಿನಗೂಲಿಯನ್ನೇ ಅವಲಂಬಿಸಿರುವ ಅವರಿಗೆ ಬೇಕಿರುವುದು ಪರಿಹಾರ ಮಾತ್ರ. ಹಣ ಮಾತ್ರ ಅವರ ಜೀವನಕ್ಕೆ ನೆಮ್ಮದಿ ತರಬಲ್ಲದು. [ಸಲ್ಮಾನ್ ರನ್ನು ಜೈಲಿಗೆ ಕಳಿಸಿದ ಹೀರೋ ಈ ಬಾಡಿಗಾರ್ಡ್]

ಅದಾದ್ರೂ ಸಿಕ್ಕಿದೆಯಾ? ಊಹುಂ. ಹತ್ತು ಲಕ್ಷ ರು. ಪರಿಹಾರ ನೀಡುವುದಾಗಿ ವಾಗ್ದಾನ ನೀಡಲಾಗಿತ್ತು. ಹತ್ತು ಲಕ್ಷದಲ್ಲಿ ದಮ್ಮಡಿ ಇರಲಿ, ಹದಿಮೂರು ವರ್ಷದಲ್ಲಿ ಸಲ್ಮಾನ್ ಕುಟುಂಬದಿಂದ ಒಬ್ಬರೂ ಅವರನ್ನು ಭೇಟಿಯಾಗಲು ಬಂದಿಲ್ಲ, ಸಾಂತ್ವನದ ಮಾತು ಹೇಳಿಲ್ಲ, ಕುಟುಂಬ ಹೇಗೆ ಜೀವನ ಸಾಗಿಸುತ್ತಿದೆ ಅಂತ ಕೇಳಿಲ್ಲ.
ಅಪ್ಪ ಸತ್ತಾಗ ಹನ್ನೆರಡು ವರ್ಷದವನಿದ್ದ ಮಗ ಫಿರೋಜ್ ಶೇಖ್ ಇಂದು ಬೆಳೆದು ದೊಡ್ಡವನಾಗಿದ್ದಾನೆ. ಆದರೆ, ವಿದ್ಯಾಭ್ಯಾಸದಿಂದ ವಂಚಿತನಾಗಿದ್ದಾನೆ. "ಅಪ್ಪ ಇದ್ದಿದ್ದರೆ ಓದುತ್ತಿದ್ದೆ. ಹೊಟ್ಟೆ ಹೊರೆಯಲು ಕೆಲಸ ಮಾಡಲೇಬೇಕಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಕೆಲಸವೂ ಸರಿಯಾಗಿ ಸಿಗಲಿಲ್ಲ" ಎಂದು ಮ್ಲಾನವದನನಾಗಿ ನುಡಿಯುತ್ತಾನೆ.
ತೀರ್ಪು ಪ್ರಕಟವಾಗಿ ಶಿಕ್ಷೆ ಪ್ರಮಾಣ ಘೋಷಣೆಯ ಸಮಯ, ಸಲ್ಮಾನ್ ಖಾನ್ ವಕೀಲರು, ನೂರುಲ್ಲಾ ಕುಟುಂಬಕ್ಕೆ ಪರಿಹಾರ ನೀಡಲು ಸಿದ್ಧ, ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಗೋಗರೆಯುತ್ತಿದ್ದರು. ಸಲ್ಮಾನ್ ಮನವಿಯನ್ನು ಪುರಸ್ಕರಿಸದ ನ್ಯಾಯಾಧೀಶ ದೇಶಪಾಂಡೆ ಅವರು 5 ವರ್ಷ ಶಿಕ್ಷೆ ನೀಡಿ ತೀರ್ಪು ನೀಡಿದರು.
ಆದರೆ, ಇಷ್ಟು ವರ್ಷಗಳ ಕಾಲ, ತಾನು ಕಾರನ್ನು ಚಲಾಯಿಸುತ್ತಲೇ ಇರಲಿಲ್ಲ ಎಂದು ವಾದಿಸುತ್ತಿದ್ದ ಸಲ್ಮಾನ್, ಬಡವರಿಗಾಗಿ ಬೀಯಿಂಗ್ ಹ್ಯೂಮನ್ ಚಾರಿಟಿ ಕೆಲಸ ಮಾಡುತ್ತಿರುವ ಸಲ್ಲುಗೆ ನೂರುಲ್ಲಾ ಅವರ ಕೂಗು ಏಕೆ ಕೇಳಲಿಲ್ಲ? ಅಷ್ಟೂ ಮಾನವೀಯತೆ ಅವರಿಗಿರಲಿಲ್ಲವೆ? ಕನಿಷ್ಠ ಪರಿಹಾರ ನೀಡಿದ್ದರೂ ಸತ್ತ ನೂರುಲ್ಲಾ ಮೊಹಮ್ಮದ್ ಶರೀಫ್ ಆತ್ಮಕ್ಕೆ ಶಾಂತಿ ದೊರೆಯುತ್ತಿತ್ತು. [ಸಲ್ಮಾನ್ ಗೆ ರಕ್ಷೆ ನೀಡಿದ 'ಬೀಯಿಂಗ್ ಹ್ಯೂಮನ್']
ಆ ಘಟನೆಯಲ್ಲಿ ಕಾಲು ಕಳೆದುಕೊಂಡಿರುವ ಮತ್ತೊಬ್ಬ ದುರ್ದೈವಿ ಅಬ್ದುಲ್ಲಾ ರೌಫ್ ಶೇಖ್, ಈ ತೀರ್ಪಿಗೆ ಸಂಬಂಧಿಸಿದಂತೆ ಯಾವುದೇ ಭಾವನೆ ವ್ಯಕ್ತಪಡಿಸಲು ಇಚ್ಛಿಸುವುದಿಲ್ಲ. ಸಲ್ಮಾನ್‌ಗೆ ಶಿಕ್ಷೆಯಾದರೆ ನನ್ನ ಕಳೆದುಹೊದ ಕಾಲು ತಿರುಗಿ ಬರುತ್ತಾ, ನನಗೇನಾದರೂ ಲಾಭವಾಗುತ್ತದೆಯಾ ಎಂದು ವೇದಾಂತಿಯಂತೆ ಪ್ರಶ್ನಿಸುತ್ತಾರೆ.












Click it and Unblock the Notifications