ಮನ್ಸುಖ್ ಕಾರು ಕಳುವಾಗುವ ಹಿಂದಿನ ದಿನ ನಕಲಿ ಆಧಾರ್ ಐಡಿ ಬಳಸಿ ಹೋಟೆಲ್‌ನಲ್ಲಿ ತಂಗಿದ್ದ ವಾಜೆ
ಮುಂಬೈ, ಮಾರ್ಚ್ 23: ಉದ್ಯಮಿ ಅನಿಲ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಬಂಧಿತರಾಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ, ಮನ್ಸುಖ್ ಹಿರೇನ್ ಅವರ ಸ್ಕಾರ್ಪಿಯೋ ಕಾರು ಕಳ್ಳತನವಾಗುವ ಹಿಂದಿನ ದಿನವಷ್ಟೇ ಐಷಾರಾಮಿ ಹೋಟೆಲ್ ಒಂದರಲ್ಲಿ ತಂಗಲು ನಕಲಿ ಆಧಾರ್ ಕಾರ್ಡ್ ಬಳಸಿದ್ದರು ಎಂದು ತಿಳಿದುಬಂದಿದೆ.
ನಕಲಿ ಆಧಾರ್ ಕಾರ್ಡ್‌ನಲ್ಲಿ ಸಚಿನ್ ವಾಜೆ ತಮ್ಮ ಹೆಸರನ್ನು ಸುಶಾಂತ್ ಸದಾಶಿವ್ ಖಮ್ಕಾರ್ ಎಂದು ನಮೂದಿಸಿದ್ದರು. ತಮ್ಮ ಜನ್ಮದಿನಾಂಕವನ್ನು ಜೂನ್ 15, 1972 ರಂದು ಉಲ್ಲೇಖಿಸಿದ್ದರು. ವಾಸ್ತವವಾಗಿ ಅವರ ಜನ್ಮದಿನಾಂಕ ಫೆಬ್ರವರಿ 22, 1972. ನಕಲಿ ಆಧಾರ್ ಐಡಿಯಲ್ಲಿ ಅವರು ತಮ್ಮ ನೈಜ ಫೋಟೊವನ್ನು ಬಳಸಿದ್ದರು.
ನಕಲಿ ಆಧಾರ್ ಕಾರ್ಡ್‌ನ ಸಂಖ್ಯೆ 7825-2857-5822. ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್ ಎಂಬ ಐಷಾರಾಮಿ ಹೋಟೆಲ್‌ನಲ್ಲಿ ಸಚಿನ್ ವಾಜೆ ಈ ನಕಲಿ ದಾಖಲೆಗಳನ್ನು ಬಳಸಿ ಫೆ. 15 ರಿಂದ 20ರವರೆಗೂ ಉಳಿದುಕೊಂಡಿದ್ದರು ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡ ಈ ಹೋಟೆಲ್‌ಗೆ ಭೇಟಿ ನೀಡಿ, ಸಚಿನ್ ವಾಜೆ ಉಳಿದುಕೊಂಡಿದ್ದ ಕೊಠಡಿಯಲ್ಲಿ ತಪಾಸಣೆ ನಡೆಸಿದೆ. ಹೋಟೆಲ್‌ನಲ್ಲಿ ಉಳಿದುಕೊಳ್ಳಲು ವಾಜೆ ನಕಲಿ ಗುರುತಿನ ಚೀಟಿಯನ್ನು ಏಕೆ ಬಳಸಿದ್ದರು ಮತ್ತು ಆ ಅವಧಿಯಲ್ಲಿ ಯಾರನ್ನೆಲ್ಲ ಭೇಟಿಯಾಗಿದ್ದರು ಎನ್ನುವುದು ಸ್ಪಷ್ಟವಾಗಿಲ್ಲ.
ಹೋಟೆಲ್‌ನಲ್ಲಿ ವಾಸವಿದ್ದ ಅವಧಿಯಲ್ಲಿ ಸಚಿನ್ ವಾಜೆಯ ಚಲನವಲನಗಳನ್ನು ಪರಿಶೀಲಿಸಲು ಎನ್‌ಐಎ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಫೆ. 16ರಂದು ಸಚಿನ್ ವಾಜೆ ಹೋಟೆಲ್‌ನಲ್ಲಿ ರೂಂ ಪಡೆದ ಮರುದಿನವೇ, ಮುಕೇಶ್ ಅಂಬಾನಿ ಮನೆ ಎದುರು ಫೆ. 25ರಂದು ಸ್ಫೋಟಕದೊಂದಿಗೆ ಪತ್ತೆಯಾಗಿದ್ದ ಸ್ಕಾರ್ಪಿಯೋ ಕಾರು ಕಳುವಾಗಿತ್ತು ಎಂದು ಮನ್ಸುಖ್ ಹಿರೇನ್ ದೂರು ನೀಡಿದ್ದರು. ಈ ಕಾರು ಸಚಿನ್ ವಾಜೆ ವಶದಲ್ಲಿತ್ತು. ಹೋಟೆಲ್‌ನಿಂದ ಕೆಲವೇ ಕಿಮೀ ದೂರದಲ್ಲಿರುವ ಅಂಬಾನಿಯ ಅಂಟಿಲಿಯಾ ಮನೆ ಎದುರು ವಾಜೆಯೇ ಅದನ್ನು ನಿಲ್ಲಿಸಿದ್ದರು ಎಂದು ಶಂಕಿಸಲಾಗಿದೆ.












Click it and Unblock the Notifications