ಸೊಸೆಯನ್ನು ಉಳಿಸುವುದಕ್ಕಾಗಿ ಮಗನನನ್ನೇ ಕೊಂದ ತಾಯಿ!
ಮುಂಬೈ, ಆಗಸ್ಟ್ 18: ಕುಡಿದು ಪತ್ನಿಯನ್ನು ಹಿಂಸಿಸುತ್ತಿದ್ದ ಮಗನಿಂದ ರೋಸಿಹೋಗಿದ್ದ ತಾಯಿಯೊಬ್ಬರು, ಸೊಸೆಯನ್ನು ರಕ್ಷಿಸುವುದಕ್ಕೋಸ್ಕರ ತಮ್ಮ ಸ್ವಂತ ಮಗನನ್ನೇ ಕೊಂದ ಘಟನೆ ಮುಂಬೈಯಲ್ಲಿ ನಡೆದಿದೆ.
ಆಗಸ್ಟ್ 15 ರಂದು ನಡೆದ ಘಟನೆ ನಡವಾಗಿ ಬೆಳಕಿಗೆ ಬಂದಿದೆ. ಅನ್ವಾರಿ ಇದ್ರಿಸಿ ಎಂಬ ಮಹಿಳೆಯ ಮಗ ನದೀಮ್ ಕುಡಿತಕ್ಕೆ ದಾಸನಾಗಿದ್ದ. ಇದೇ ಕಾರಣಕ್ಕಾಗಿಯೇ ಆತನ ಪತ್ನಿ ಮನೆಬಿಟ್ಟು ಹೋಗಿದ್ದಳು. ಪತ್ನಿ ಮನೆಬಿಟ್ಟು ಹೋದ ಎರಡು ವರ್ಷದ ನಂತರ ಮತ್ತೊಬ್ಬ ಮಹಿಳೆಯೊಡನೆ ಮದುವೆಯಾದ ನದೀಮ್, ಕೆಲ ದಿನ ಆಕೆಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. ನಂತರ ಮತ್ತೆ ಹಳೇ ಚಟವನ್ನು ಆರಂಭಿಸಿದ್ದ.

ಪ್ರತಿದಿನ ಕುಡಿದು ಬಂದು ಪತ್ನಿಗೆ ಹಿಂಸೆ ನೀಡುತ್ತಿದ್ದ ಮಗನ ಉಪಟಳ ಎಷ್ಟೇ ಬುದ್ಧಿವಾದ ಹೇಳಿದರೂ, ಪಾಠ ಕಲಿಸಿದರೂ ಹತೋಟಿಗೆ ಬಂದಿರದ ಕಅರಣ ತಾಯಿ ಅನ್ವಾರಿ ರೋಸಿಹೋಗಿದ್ದರು.
ಆಗಸ್ಟ್ 15 ರಂದು ರಾತ್ರಿ ಕುಡಿದು ಮನೆಗೆ ಬಂದ ಮಗ ಪತ್ನಿಗೆ ಹಿಂಸೆ ನೀಡಲು ಆರಂಭಿಸಿದ್ದ. ಇದರಿಂದ ಕೋಪಗೊಂಡ ಆತನ ತಾಯಿ ಆ ಹಿಂಸೆಯನ್ನು ತಡೆಯಲು ಹೋದಾಗ ತಾಯಿಯ ಮೇಲೆಯೂ ಕೈಯೆತ್ತಿದ್ದ. ಮಗನ ವರ್ತನೆ ಮಿತಿ ಮೀರಿದಾಗ, ತಅಳ್ಮೆ ಕಳೆದುಕೊಂಡ ತಾಯಿ, ಕುಡಿದಿದ್ದ ಆತನಿಗೆ ಹೊಡೆದು, ನಂತರ ತಮ್ಮ ದುಪ್ಪಟ್ಟಾವನ್ನು ಆತನ ಕತ್ತಿಗೆ ಸುತ್ತಿ ಆತನನ್ನು ಕೊಲೆ ಮಾಡಿದ್ದಾರೆ!
ಮಗ ಏನೇ ತಪ್ಪು ಮಾಡಿದರೂ ಸಮರ್ಥಿಸಿಕೊಂಡು, ಸೊಸೆಯ ಮೇಲೆ ಗೂಬೆ ಕೂರಿಸುವ ಈ ಕಾಲದಲ್ಲಿ ಸೊಸೆಗಾಗಿ ಮಗನನ್ನೇ ಕೊಲ್ಲುವ ಮಟ್ಟಕ್ಕೆ ಇಳಿಯುವ ಅತ್ತೆಯರೂ ಇದ್ದಾರೆಂದರೆ ಅಚ್ಚರಿಯೇ ಸರಿ.
ಸದ್ಯಕ್ಕೆ ಮುಂಬೈ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications