ಭಾರತ ಲಾಕ್ ಡೌನ್: ಮನುಷ್ಯರಿಲ್ಲದ ಮುಂಬೈನಲ್ಲಿ ಪಕ್ಷಿಗಳ ಕಲರವ
ಮುಂಬೈ, ಮೇ.02: ನೊವೆಲ್ ಕೊರೊನಾ ವೈರಸ್ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೂರನೇ ಅವಧಿಯ ಭಾರತ ಲಾಕ್ ಡೌನ್ ಮುಂದುವರಿದಿದೆ. ಮಹಾಮಾರಿಗೆ ಬೆದರಿದ ಜನರು ಮನೆಗಳಲ್ಲಿ ಬಂಧಿಯಾಗಿದ್ದಾರೆ. ಮುಂಬೈನಲ್ಲಿ ಸಾವಿರ ಸಾವಿರ ರಾಜಹಂಸ ಪಕ್ಷಿಗಳು ಸ್ವಚ್ಛಂಧವಾಗಿ ಹಾರಾಡುತ್ತಿವೆ.
ಸದಾ ಜನಜಂಗುಳಿಯಿಂದಲೇ ತುಂಬಿ ತುಳುಕುತ್ತಿದ್ದ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಚಿತ್ರಣ ಬದಲಾಗಿದೆ. ಮುಂಬೈಗೆ ವಲಸೆ ಬಂದಿರುವ ಸಾವಿರಾರು ಸಂಖ್ಯೆಯ ರಾಜಹಂಸ(ಪ್ಲೊಮಿಂಗೋ) ಪಕ್ಷಿಗಳು ಎಲ್ಲರ ಲಕ್ಷ್ಯ ಸೆಳೆಯುತ್ತಿವೆ.
ಸಾಮಾನ್ಯವಾಗಿ ಸೆಪ್ಟಂಬರ್ ನಿಂದ ಮೇ ಅಂತ್ಯದವರೆಗೂ ರಾಜಹಂಸ ಪಕ್ಷಿಗಳು ಆಹಾರವನ್ನು ಅರಸಿ ವಲಸೆ ಬರುತ್ತವೆ ಎಂದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಹಾಯಕ ನಿರ್ದೇಶಕ ರಾಹುಲ್ ಖೋಟ್ ಮಾಹಿತಿ ನೀಡಿದ್ದಾರೆ.

ಈ ವರ್ಷ ಹೊಸ ದಾಖಲೆ ನಿರ್ಮಾಣ:
ಕಳೆದ ವರ್ಷದಲ್ಲಿ ಸುಮಾರು 1,34,000 ರಾಜಹಂಸ ಪಕ್ಷಿಗಳು ವಲಸೆ ಬಂದಿದ್ದು ದಾಖಲೆಯಾಗಿತ್ತು. ಆದರೆ ಭಾರತ ಲಾಕ್ ಡೌನ್ ನಡುವೆ ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಬರುವ ನಿರೀಕ್ಷೆಯಿದೆ ಎಂದು ರಾಹುಲ್ ಖೋಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಲಾಕ್ ಡೌನ್ ಗಿಂತಲೂ ಮೊದಲೇ 1,25,000 ರಾಜಹಂಸ ಪಕ್ಷಿಗಳು ವಲಸೆ ಬಂದಿರುವ ಬಗ್ಗೆ ಅಂಕಿ-ಅಂಶಗಳಿವೆ. ಕಳೆದ ಮಾರ್ಚ್.25ರ ಬಳಿಕ ಭಾರತ ಲಾಕ್ ಡೌನ್ ನಿಂದ ಜನ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಇದರಿಂದ ಹೆಚ್ಚು ಹೆಚ್ಚು ಪಕ್ಷಿಗಳು ವಲಸೆ ಬಂದಿದ್ದು, ಮೇ ಅಂತ್ಯದ ವೇಳೆಗೆ ಕಳೆದ ವರ್ಷದ ದಾಖಲೆಯನ್ನು ಮೀರಿಸುವ ಮಟ್ಟಕ್ಕೆ ಪಕ್ಷಿಗಳು ವಲಸೆ ಬಂದಿರುತ್ತವೆ ಎಂದು ಅಂದಾಜಿಸಲಾಗಿದೆ.













Click it and Unblock the Notifications