ಹುಷಾರ್: ಮಹಾರಾಷ್ಟ್ರದಲ್ಲಿ ಒಂದೇ ದಿನ 5368 ಕೊವಿಡ್, 198 ಓಮಿಕ್ರಾನ್ ಪ್ರಕರಣ ಪತ್ತೆ!
ಮುಂಬೈ, ಡಿಸೆಂಬರ್ 31: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಈಗಾಗಲೇ ಶುರುವಾಗಿದೆ ಎಂದು ರಾಜ್ಯದ ಕೊವಿಡ್ ಟಾಸ್ಕ್ ಫೋರ್ಸ್ ಸದಸ್ಯ ಡಾ.ಶಶಾಂಕ್ ಜೋಶಿ ಸ್ಪಷ್ಟವಾಗಿ ಉಲ್ಲೇಖಿಸಿರುವುದು ಅಂಕಿ-ಅಂಶಗಳಲ್ಲಿ ಗೋಚರಿಸುತ್ತಿದೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ 5,368 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಪೈಕಿ ಸೋಂಕಿತರ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆೊಳಪಡಿಸಿದ ಸಂದರ್ಭದಲ್ಲಿ 198 ಸೋಂಕಿತರಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಅತಿಹೆಚ್ಚು ಹರಡುವಿಕೆ ವೇಗವನ್ನು ಹೊಂದಿದೆ ಎಂಬ ತಜ್ಞರ ಎಚ್ಚರಿಕೆ ಸತ್ಯವಾಗುತ್ತಿದೆ. ರಾಜ್ಯದಲ್ಲಿ ಬುಧವಾರಕ್ಕಿಂತ ಗುರುವಾರ ಪತ್ತೆಯಾದ ಸೋಂಕಿತ ಪ್ರಕರಣಗಳಲ್ಲಿ ಶೇ.37ರಷ್ಟು ಏರಿಕೆಯಾಗಿದೆ.

ಮುಂಬೈನಲ್ಲಿ ಶೇ.46ರಷ್ಟು ಪ್ರಕರಣಗಳ ಹೆಚ್ಚಳ
ಮಹಾರಾಷ್ಟ್ರದ ಪೈಕಿ ಮಹಾನಗರಿ ಮುಂಬೈನಲ್ಲಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ 3,671 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮೊನ್ನೆಗಿಂತ ನಿನ್ನೆ ವರದಿಯಾದ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.46ರಷ್ಟು ಏರಿಕೆ ಕಂಡು ಬಂದಿದೆ. ಇದರ ಹೊರತಾಗಿ ಮುಂಬೈ ನಗರವೊಂದರಲ್ಲೇ 190 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಮುಂಬೈನಲ್ಲಿ ಐದು ಪಟ್ಟು ಕೊವಿಡ್-19 ಪ್ರಕರಣಗಳ ಹೆಚ್ಚಳ
ವಾಣಿಜ್ಯನಗರಿ ಮುಂಬೈನಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಒಂದೇ ವಾರದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಶುಕ್ರವಾರ ನಗರದಲ್ಲಿ 683 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು, ಆದರೆ ಈ ಶುಕ್ರವಾರವೊಂದೇ ದಿನದಲ್ಲಿ 3,671 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಆ ಮೂಲಕ ಒಂದೇ ವಾರದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದೆ.

ರಾಜ್ಯದಲ್ಲಿ ಹೆಚ್ಚಿದ ಓಮಿಕ್ರಾನ್ ಸೋಂಕಿತರ ಭೀತಿ
ಭಾರತದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಈಗಾಗಲೇ 961ರ ಗಡಿ ದಾಟಿದೆ. ಮಹಾರಾಷ್ಟ್ರವೊಂದರಲ್ಲೇ ಈವರೆಗೆ 450 ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕೊರೊನಾವೈರಸ್ ಅಲೆಯ ಭೀತಿಯಲ್ಲಿ ಮುಂಬೈ ಮಹಾನಗರ ಪಾಲಿಕೆಯು ಹೆಚ್ಚುತ್ತಿರುವ ಪ್ರಕರಣಗಳ ನಿರ್ವಹಣೆ ಹಾಗೂ ನಿಯಂತ್ರಣಕ್ಕಾಗಿ ವಾರ್ಡ್ ಮಟ್ಟದ ವಾರ್ ರೂಮ್ ಅನ್ನು ಪುನಾರಂಭಿಸುತ್ತಿದೆ.
ಈ ವಾರ್ ರೂಮ್‌ಗಳು ಎಲ್ಲಾ 24 ವಾರ್ಡ್‌ಗಳಲ್ಲಿ ಆಸ್ಪತ್ರೆಯ ದಾಖಲಾತಿ, ಆಮ್ಲಜನಕ ಮತ್ತು ಔಷಧದ ಅವಶ್ಯಕತೆಗಳು ಮತ್ತು ಲಸಿಕೆ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿವೆ. ಈ ವಾರ್ ರೂಮ್ ಮೂಲಕ "ಕೊವಿಡ್-19 ಪರೀಕ್ಷೆ, ಸೋಂಕಿತರ ಪತ್ತೆಹಚ್ಚುವಿಕೆ ಮತ್ತು ರೋಗಿಗಳ ಚಿಕಿತ್ಸೆ" ತಂತ್ರವನ್ನು ಪಾಲಿಸುತ್ತದೆ. ಇದರ ಜೊತೆಗೆ ಕೊವಿಡ್-19 ರೋಗಿಗಳ ಹೋಮ್ ಕ್ವಾರೆಂಟೇನ್ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಮಾಡುತ್ತದೆ.

ಕೊವಿಡ್-19 ರೋಗಿಗಳಲ್ಲಿ ಲಕ್ಷಣಗಳೇ ಪತ್ತೆಯಿಲ್ಲ
ಮುಂಬೈ ಮಹಾನಗರದಲ್ಲಿ ಕೊವಿಡ್-19 ಜೊತೆಗೆ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಈ ರೀತಿ ಸೋಂಕು ಪತ್ತೆಯಾದವರ ಪೈಕಿ ಶೇ.90ರಷ್ಟು ಜನರಲ್ಲಿ ಯಾವುದೇ ರೀತಿ ರೋಗದ ಲಕ್ಷಣಗಳು ಕಂಡು ಬಂದಿಲ್ಲ ಎಂದು ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. ಇದರ ಮಧ್ಯೆ ಹೊಸ ವರ್ಷಾಚರಣೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ, ಆದರೂ ನಗರದ ರಸ್ತೆಗಳಲ್ಲಿ ಜನಸಂದಣಿ ಹೆಚ್ಚುತ್ತಿರುವುದನ್ನು ಕಾಣಬಹುದಾಗಿದೆ.












Click it and Unblock the Notifications