'ಇದು ಟ್ರೇಲರ್ ಅಷ್ಟೇ': ಮುಕೇಶ್ ಅಂಬಾನಿಗೆ ಎಚ್ಚರಿಕೆ ಪತ್ರ
ಮುಂಬೈ, ಫೆಬ್ರವರಿ 26: ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಎದುರು ಅನುಮಾನಾಸ್ಪದ ರೀತಿಯಲ್ಲಿ ನಿಲ್ಲಿಸಲಾಗಿದ್ದ ಎಸ್‌ಯುವಿಯಲ್ಲಿ ಗುರುವಾರ ಸಂಜೆ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಅದರಲ್ಲಿ ಪತ್ರವೊಂದು ಸಹ ದೊರಕಿದ್ದು, 'ಇದು ಟ್ರೇಲರ್ ಅಷ್ಟೇ' ಎಂಬ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಮುಂಬೈನ ಮುಕೇಶ್ ಅಂಬಾನಿ ಅವರ ಅಂಟಿಲಿಯಾ ನಿವಾಸದ ಸಮೀಪ ಸ್ಕಾರ್ಪಿಯೋ ವಾಹನದಲ್ಲಿ 20 ಜಿಲೆಟಿನ್ ಸ್ಫೋಟಕಗಳು ಹಾಗೂ ಒಂದು ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ವಾಹನದ ಚಾಲಕನ ಸೀಟಿನ ಪಕ್ಕದಲ್ಲಿ 'ಮುಂಬೈ ಇಂಡಿಯನ್ಸ್' ಐಪಿಎಲ್ ಕ್ರಿಕೆಟ್ ತಂಡದ ಮುದ್ರೆಯುಳ್ಳ ಬ್ಯಾಗ್‌ನಲ್ಲಿ ಪತ್ರ ದೊರಕಿದ್ದು, ಅದರ ವಿವರಗಳನ್ನು ಪೊಲೀಸರು ಶುಕ್ರವಾರ ಬಹಿರಂಗಪಡಿಸಿದ್ದಾರೆ.
ವ್ಯಾಕರಣ ದೋಷವಿರುವ ಹರುಕುಮುರುಕು ಇಂಗ್ಲಿಷ್‌ನಲ್ಲಿ ಈ ಪತ್ರ ಬರೆಯಲಾಗಿದೆ. 'ನೀತಾ ಅತ್ತಿಗೆ ಮತ್ತು ಮುಕೇಶ್ ಅಣ್ಣ ಅವರಿಗೆ, ಇದು ಟ್ರೇಲರ್ ಅಷ್ಟೇ. ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿದೆ. ಪಿಕ್ಚರ್ ಇನ್ನೂ ಬಾಕಿ ಇದೆ. ಮುಂದಿನ ಸಲ ಈ ಸಾಮಗ್ರಿಗಳನ್ನು (ಜಿಲೆಟಿನ್ ಕಡ್ಡಿಗಳು) ಅಭಿವೃದ್ಧಿಪಡಿಸಿದ ಸ್ಥಿತಿಯಲ್ಲಿ ನಿಮಗೆ ತಲುಪಿಸಲಾಗುವುದು' ಎಂದು ಎಚ್ಚರಿಕೆ ನೀಡಲಾಗಿದೆ.

ಮುಕೇಶ್ ಕಾರ್ ನಂಬರ್ ಪ್ಲೇಟ್
ಮುಕೇಶ್ ಅಂಬಾನಿ ಅವರ ಬಹುಮಹಡಿ ನಿವಾಸದಿಂದ ಕೆಲವೇ ಅಡಿ ದೂರಗಳಲ್ಲಿ ಹಸಿರು ಬಣ್ಣದ ಸ್ಕಾರ್ಪಿಯೋದಲ್ಲಿ ಸ್ಫೋಟಕಗಳು ಹಾಗೂ ಪತ್ರ ಪತ್ತೆಯಾಗಿದೆ. ಈ ಸ್ಕಾರ್ಪಿಯೋಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು. ಅಂಬಾನಿ ಅವರಿಗೆ ಸೇರಿದ ವಾಹನಗಳಲ್ಲಿ ಒಂದರ ಸಂಖ್ಯೆಗೆ ಅದು ಹೋಲಿಕೆಯಾಗುತ್ತಿತ್ತು. ಅಂದರೆ ದುಷ್ಕರ್ಮಿಗಳು ಮುಕೇಶ್ ಅಂಬಾನಿ ಅವರ ಕುರಿತು ಅನೇಕ ವಿವರಗಳನ್ನು ಕಲೆಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಕದ್ದು ತಂದ ವಾಹನ
ವಾಹನದ ಚಾಸಿಸ್ ಸಂಖ್ಯೆ ಹಾಗೂ ಇತರೆ ವಿವರಗಳನ್ನು ಪರಿಶೀಲಿಸಿದ್ದು, ಇದು ಮಹಾರಾಷ್ಟ್ರದ ಹೊರ ರಾಜ್ಯದಿಂದ ಕದ್ದು ತಂದ ವಾಹನ ಎನ್ನುವುದು ಪತ್ತೆಯಾಗಿದೆ. ಅಲ್ಲದೆ, ಇದರಲ್ಲಿ ಸಿಕ್ಕ ಜಿಲೆಟಿನ್ ಕಡ್ಡಿಗಳನ್ನು ನಾಗಪುರ ಮೂಲಕ ಕಂಪೆನಿ ತಯಾರಿಸಿದೆ. ಇಲ್ಲಿ ತಯಾರಾಗುವ ಜಿಲೆಟಿನ್ ಕಡ್ಡಿಗಳನ್ನು ಗಣಿಗಾರಿಕೆಯಲ್ಲಿ ಬಂಡೆಗಳ ಸ್ಫೋಟಕಕ್ಕೆ ಬಳಸಲಾಗುತ್ತದೆ.

ಚಾಲಜನ ಗುರುತು ಸಿಕ್ಕಿಲ್ಲ
ವೊರ್ಲಿ ಪ್ರದೇಶದಿಂದ ಈ ಕಾರು ಬರುವುದು ಮೂರು ವಿಭಿನ್ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪತ್ತೆಯಾಗಿದೆ. ಅಂಬಾನಿ ನಿವಾಸದ ಸಮೀಪದಲ್ಲಿ ಈ ಕಾರ್ ನಿಲ್ಲಿಸಿದ ಚಾಲಕ ಅಲ್ಲಿಂದ ನಡೆದುಸಾಗಿದ್ದಾನೆ. ಆತ ಮುಸುಕು ಹಾಕಿದ್ದರಿಂದ ಗುರುತು ಪತ್ತೆ ಮಾಡುವುದು ಕಷ್ಟವಾಗಿದೆ. ಆತ ಮನೆಯ ಸಮೀಪದಲ್ಲಿಯೇ ಕಾರು ನಿಲ್ಲಿಸಲು ಉದ್ದೇಶಿಸಿದ್ದ. ಆದರೆ ಅಲ್ಲಿ ಭದ್ರತೆ ಹೆಚ್ಚಿದ್ದರಿಂದ ಮನೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದಾನೆ.

ಆತಂಕ ಮೂಡಿಸಿದ ಘಟನೆ
ಅಂಟಿಲಿಯಾ ನಿವಾಸದ ಮುಂಭಾಗದಲ್ಲಿ 20 ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಎಸ್‌ಯುವಿಯೊಂದು ಗುರುವಾರ ಸಂಜೆ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಪೆಡ್ಡರ್ ರಸ್ತೆಯ ಅಂಬಾನಿ ನಿವಾಸದ ಸಮೀಪದಲ್ಲಿ ಸ್ಕಾರ್ಪಿಯೋ ಕಾರ್‌ನಲ್ಲಿ ಈ ಸ್ಫೋಟಕಗಳು ಪತ್ತೆಯಾಗಿದ್ದವು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ, ಬಾಂಬ್ ನಿಷ್ಕ್ರಿಯ ದಳ, ಶ್ವಾನಪಡೆ, ಕ್ರೈಂ ಬ್ರಾಂಚ್ ಮುಂತಾದ ಪಡೆಗಳು ಸ್ಥಳಕ್ಕೆ ಭೇಟಿ ನೀಡಿದ್ದವು. ಇದು ತೀವ್ರ ಆತಂಕ ಮೂಡಿಸಿದ ಘಟನೆಯಾಗಿದ್ದರಿಂದ ಸುತ್ತಮುತ್ತಲಿನ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.












Click it and Unblock the Notifications