ಹೀನಾಗೆ ವಿಶ್ವಕಪ್ ಶೂಟಿಂಗ್ ನಲ್ಲಿ ಚಿನ್ನ
ಮುಂಬೈ, ನ.12: ಜರ್ಮನಿಯ ಮ್ಯೂನಿಕ್ ನಲ್ಲಿ ನಡೆದ ಐಎಸ್ ಎಸ್ ಎಫ್ ವಿಶ್ವಕಪ್ ಶೂಟಿಂಗ್ ನ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಹೀನಾ ಸಿಧು ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆಗೈದಿದ್ದಾರೆ.
ವಿಶ್ವಕಪ್ ನ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಶೂಟರ್ ಎಂಬ ಗೌರವವನ್ನು ಹೀನಾ ತಮ್ಮದಾಗಿಸಿ ಕೊಂಡರು. ಅಂಜಲಿ ಭಾಗ್ವತ್ (2002) ಮತ್ತು ಗಗನ್ ನಾರಂಗ್ (2008) ಅವರು ಈ ಮುನ್ನ ರೈಫಲ್ ಶೂಟಿಂಗ್ ವಿಭಾಗದಲ್ಲಿ ಇದೇ ಸಾಧನೆ ಮಾಡಿದ್ದರು. ಫೈನಲ್ ನಲ್ಲಿ ಪ್ರಮುಖ ಸ್ಪರ್ಧಿ ಗಳನ್ನು ಮಣಿಸಿ ಹೀನಾ ಈ ಸಾಧನೆ ಮಾಡಿದ್ದಾರೆ ಎಂದು ಮಹಾರಾಷ್ಟ್ರ ರೈಫಲ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಐಎಸ್ ಎಸ್ ಎಫ್ ವಿಶ್ವಕಪ್ ಪ್ರತಿ ವರ್ಷ ನಡೆಯುತ್ತಿದ್ದು, ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 10 ರಲ್ಲಿರುವ ಶೂಟರ್ ಗಳು ಮಾತ್ರ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಫೈನಲ್ ನಲ್ಲಿ ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಚೀನಾದ ಗುವೊ ವೆನ್ ಜುನ್, ವಿಶ್ವ ಚಾಂಪಿಯನ್ ಸೆರ್ಬಿಯಾದ ಅರುನೋವಿಚ್ ಜೊರಾನಾ ಮತ್ತು ಉಕ್ರೇನ್ ನ ಒಲೆನಾ ಕೊತ್ಸೆವಿಚ್ ಅವರನ್ನು ಹೀನಾ ಹಿಂದಿಕ್ಕಿ ಬಂಗಾರ ಗೆದ್ದುಕೊಂಡರು.

ಅರ್ಹತಾ ಹಂತದಲ್ಲಿ 384 ಪಾಯಿಂಟ್ ಕಲೆಹಾಕಿದ ಭಾರತದ ಶೂಟರ್ ಹೀನಾ ಮೂರನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು. ಆದರೆ, ಫೈನಲ್ ನಲ್ಲಿ ಹೀನಾ ಉತ್ತಮ ಆರಂಭ ಪಡೆಯಲಿಲ್ಲ. 9.3 ಮತ್ತು 9.3 ಪಾಯಿಂಟ್ ಕಲೆಹಾಕಿದರು. ಮೊದಲೆರಡು ಸುತ್ತುಗಳ ಬಳಿಕ ಎಂಟನೇ ಸ್ಥಾನಕ್ಕೆ ಕುಸಿತ ಕಂಡಿದ್ದರು. ಅನಂತರ ಭಾರತದ ಶೂಟರ್ ನಿಖರ ಗುರಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ 5.2 ಪಾಯಿಂಟ್ ಗಳ ಭಾರಿ ಅಂತರದೊಂದಿಗೆ ಚಿನ್ನ ಗೆದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದರು.
ಫೈನಲ್ ನಲ್ಲಿ ಹೀನಾ ಒಟ್ಟು 203.8 ಪಾಯಿಂಟ್ ಕಲೆಹಾಕಿದರು. ಅರುನೋವಿಚ್ (198.6) ಮತ್ತು ಬೆಲಾರಸ್ ನ ವಿಕ್ಟೋರಿಯಾ ಚೈಕಾ (176.8) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು ಕಾಮನ್ ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ರೋನಕ್ ಪಂಡಿತ್ ಅವರನ್ನು ಮದುವೆಯಾಗಿ ರುವ ಹೀನಾ ಈ ವರ್ಷದ ಆರಂಭದಲ್ಲಿ ಪಟಿಯಾಲದಿಂದ ಮುಂಬೈಗೆ ಬಂದು ನೆಲೆಸಿದ್ದರು. ಪುಣೆಯಲ್ಲಿ ತರಬೇತಿ ಪಡೆದು ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ಮ್ಯೂನಿಕ್ ಗೆ ತೆರಳಿದ್ದರು.(ಪಿಟಿಐ)












Click it and Unblock the Notifications