ಡ್ರಗ್ಸ್ ಕೇಸಿನಲ್ಲಿ ಬಾಲಿವುಡ್ ನಟ ಏಜಾಜ್ ಖಾನ್ ಬಂಧನ
ಮುಂಬೈ, ಅಕ್ಟೋಬರ್ 23: ಬಾಲಿವುಡ್ ನ ವಿವಾದಿತ ನಟ, ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಏಜಾಜ್ ಖಾನ್ ರನ್ನು ನವಿ ಮುಂಬೈನ ಪೊಲೀಸರು ಬಂಧಿಸಿದ್ದಾರೆ. ನಿಷೇಧಿತ ಡ್ರಗ್ಸ್ ಹೊಂದಿದ್ದ ಕಾರಣಕ್ಕೆ ಏಜಾಜ್ ಖಾನ್ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮುಂಬೈನ ಮಾದಕ ದ್ರವ್ಯ ನಿಗ್ರಹ ದಳದವರು ಸೋಮವಾರದಂದು ಬೇಲಾಪುರ್ ನಲ್ಲಿದ್ದ ಏಜಾಜ್ ಖಾನ್ ಅವರನ್ನು ವಶಕ್ಕೆ ಪಡೆದ ಬಳಿಕ ಮಂಗಳವಾರದಂದು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.

ಬಿಗ್ ಬಾಸ್ 7ರ ಸ್ಪರ್ಧಿಯಾಗಿದ್ದ ಏಜಾಜ್ ಖಾನ್ ಅವರು ನಿಷೇಧಿತ ಸೈಕೋಟ್ರೋಪಿಕ್ ಪದಾರ್ಥ ಹೊಂದಿದ್ದ ಎಂಬ ಶಂಕೆಯ ಮೇರೆಗೆ ಎಚ್ಚರಿಕೆ ನೀಡಲಾಗಿತ್ತು.
ನಂತರ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದಾಗ ಏಜಾಜ್ ಖಾನ್ ಬಳಿ 8 ನಿಷೇಧಿತ ಟ್ಯಾಬ್ಲೆಟ್ ಗಳು ಪತ್ತೆಯಾಗಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತುಷಾರ್ ದೋಶಿ ಹೇಳಿದರು.
ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದ ಏಜಾಜ್ ಖಾನ್, ಟ್ವೀಟ್ ಮಾಡಿ, ಇದು ನನ್ನ ವಿರುದ್ಧ ಹೂಡಿರುವ ಷಡ್ಯಂತ್ರವಾಗಿದೆ. ನನ್ನ ಬಳಿ ಯಾವ ಡ್ರಗ್ಸ್ ಇರಲಿಲ್ಲ. ಯಾವ ಡ್ರಗ್ಸ್ ನನ್ನಿಂದ ಜಪ್ತಿ ಮಾಡಿಲ್ಲ.
ನಾನು ಸತ್ಯ ಹೇಳಿದ್ದಕ್ಕೆ ನನ್ನನ್ನು ಬಂಧಿಸಲಾಗಿದೆ. ನಾನು ಸತ್ಯ ಹೇಳುವುದನ್ನು ನಿಲ್ಲಿಸಿದರೆ ಸರ್ಕಾರದ ಮುಂದೆ ಕ್ಲಿಯರ್ ಇಮೇಜ್ ಇರುವ ವ್ಯಕ್ತಿ ಎನಿಸಿಕೊಳ್ಳುತ್ತೇನೆ, ಆದರೆ, ಗಲ್ಲು ಶಿಕ್ಷೆ ಕೊಟ್ಟರೂ ಕೂಡಾ ನಾನು ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.












Click it and Unblock the Notifications