ಮುಂಬೈ: ನೈಜೀರಿಯಾ ಪ್ರಜೆಯಿಂದ ಪಾದಚಾರಿಗಳಿಗೆ ಚಾಕು ಇರಿತ
ಮುಂಬೈ ಜೂನ್ 2: ದಕ್ಷಿಣ ಮುಂಬೈನ ಚರ್ಚ್ ಗೇಟ್ ಪ್ರದೇಶದಲ್ಲಿ ನೈಜೀರಿಯಾ ಪ್ರಜೆಯೊಬ್ಬ ಬುಧವಾರ ಸಂಜೆ ಪಾದಚಾರಿಗಳ ಮೇಲೆ ಚಾಕು ಮೂಲಕ ದಾಳಿ ಮಾಡಿದ್ದಾನೆ. ಈ ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮುಂಬೈ ಪೊಲೀಸರು ನೈಜೀರಿಯಾ ಪ್ರಜೆ ಜಾನ್ (50) ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ದಕ್ಷಿಣ ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತ (ಎಸಿಪಿ) ದಿಲೀಪ್ ಸಾವಂತ್, "ದಕ್ಷಿಣ ಮುಂಬೈನ ಚರ್ಚ್ ಗೇಟ್ ಪ್ರದೇಶದ ಪಾರ್ಸಿವೆಲ್ ಬಳಿಯ ಟಾಟಾ ಗಾರ್ಡನ್‌ನಲ್ಲಿ ಘಟನೆ ಜರುಗಿದೆ. 50 ವರ್ಷ ವಯಸ್ಸಿನ ನೈಜೀರಿಯಾ ಪ್ರಜೆ ಜಾನ್ ಮಹಿಳೆಯೊಂದಿಗೆ ಕುಳಿತ್ತಿದ್ದ. ಇದಕ್ಕಿದಂತೆ ಆತನ ಬಳಿ ಇದ್ದ ಚಾಕು ತೆಗೆದು, ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಗಳ ಮೇಲೆ ದಾಳಿ ನಡೆಸಿದ್ದಾನೆ,'' ಎಂದು ತಿಳಿಸಿದ್ದಾರೆ.
"ಆರೋಪಿಯ ದಾಳಿಯಿಂದ ಕನಿಷ್ಠ 8 ಮಂದಿ ಪಾದಚಾರಿಗಳು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡ ಪಾದಚಾರಿಗಳನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಆರೋಪಿಯನ್ನು ಬಂಧಿಸಿದ್ದಾರೆ,'' ಎಂದು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳದ ಸುತ್ತಮುತ್ತ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಲ್ಲಿ ಚಾಕು ಇರಿತದ ದೃಶ್ಯಗಳು ಸೆರೆಯಾಗಿದೆ. ಆ ರಸ್ತೆ ತುಂಬ ರಕ್ತದ ಕಲೆಗಳು ಆಗಿರುವುದು ಕಂಡುಬಂದಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಕು ಇರಿತದಿಂದ ಪಾದಚಾರಿಗಳು, ಸ್ಥಳೀಯರು ಗಾಬರಿಗೊಂಡಿದ್ದರು. ಘಟನೆ ಸಮಯದಲ್ಲಿ ಪಾದಚಾರಿಗಳು ದಿಕ್ಕಾಪಾಲಾಗಿ ಓಡುತ್ತಿದ್ದ ದೃಶ್ಯ ಘಟನೆಯ ಸುತ್ತಮುತ್ತ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ದಾಳಿ ಹಿಂದಿನ ಕಾರಣ ಈವರೆಗೂ ತಿಳಿದುಬಂದಿಲ್ಲ. ಘಟನೆ ಸಂಬಂಧ ನೈಜೀರಿಯಾ ಪ್ರಜೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಚರ್ಚ್ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications