ರೈಲ್ವೆ ಹಳಿ ಮೇಲೆ ಯಮರಾಜ! ಈತ ಜೀವ ತೆಗೆಯುವವನಲ್ಲ, ಉಳಿಸುವಾತ
ಮುಂಬೈ, ನವೆಂಬರ್ 9: ಬೇಕಾಬಿಟ್ಟಿಯಾಗಿ ರೈಲ್ವೆ ಹಳಿಗಳ ಮೇಲೆ ಓಡಾಡ್ತೀರಾ? ಹಾಗೆ ಸುಮ್ ಸುಮ್ನೆ ಓಡಾಡ್ತಿದ್ರೆ ಯಮ ಹೊತ್ತೊಯ್ತಾನೆ ಹುಷಾರ್!
ರೈಲ್ವೆ ಹಳಿಗಳ ಮೇಲೆ ರಾತ್ರಿ ಹಗಲೆನ್ನದೆ ಸಾರ್ವಜನಿಕರು ಓಡಾಡುತ್ತಿರುತ್ತಾರೆ, ಹಾಗಾಗಿ ರೈಲು ಅಪಘಾತಗಳು ಕೂಡ ಹೆಚ್ಚಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಹೊಸ ಯೋಜನೆ ರೂಪಿಸಿದೆ.
ಆದರೆ ಈ ಯಮರಾಜ ಯಾರ ಜೀವವನ್ನು ತೆಗೆಯುವುದಿಲ್ಲ ಬದಲಾಗಿ ಜೀವವನ್ನು ಉಳಿಸುತ್ತಾನೆ. ಹೌದು. ಮುಂಬೈನಲ್ಲಿ ರೈಲ್ವೆ ಹಳಿ ದಾಟುವವರ ಮುಂದೆ ಯಮರಾಜ ಬಂದು ಅವರನ್ನು ಹೊತ್ತೊಯ್ದು, ಹಳಿಯಿಂದ ಬದಿಗೆ ತಂದು ಬಿಡುತ್ತಾನೆ. ಅಸಲಿಗೆ ಈ ಯಮರಾಜ ಹೀಗೆ ರೈಲ್ವೆ ನಿಲ್ದಾಣದಲ್ಲಿ ಪ್ರತ್ಯಕ್ಷವಾಗಲು ಕಾರಣ ಪಶ್ಚಿಮ ರೈಲ್ವೆ ಹಾಗೂ ಆರ್‌ಪಿಎಫ್ ಇಲಾಖೆ.

ರೈಲ್ವೆ ಹಳಿಗಳನ್ನು ಸಾರ್ವಜನಿಕರು ಬೇಕಾಬಿಟ್ಟಿ ದಾಟುವಂತಿಲ್ಲ. ಅದರಲ್ಲೂ ರೈಲು ಬರುತ್ತಿದೆ ಎಂದರೆ ರೈಲ್ವೆ ಸಿಗ್ನಲ್ ದಾಟುವಂತಿಲ್ಲ. ಆದರೂ ಸಾರ್ವಜನಿಕರು, ಪ್ರಯಾಣಿಕರು ರೈಲ್ವೆ ಹಳಿ ದಾಟಲು ಹೋಗಿ ರೈಲಿಗೆ ಸಿಕ್ಕಿ ಸಾವನ್ನಪ್ಪುವ ಪ್ರಕರಣಗಳು ನಡೆಯುತ್ತಿವೆ. ಇತ್ತೀಚೆಗಂತೂ ಈ ರೀತಿ ಪ್ರಕರಣಗಳು ಹೆಚ್ಚಾಗುತ್ತಿವೆ.
ರೈಲ್ವೆ ಹಳಿಗಳ ಮೇಲೆ ಓಡಾಡುವವರನ್ನು ತಡೆಯಲೆಂದೇ ಪಶ್ಚಿಮ ರೈಲ್ವೆ ಹಾಗೂ ಆರ್‌ಪಿಎಫ್ ಹೊಸ ಯೋಜನೆ ಜಾರಿಗೆ ತಂದಿದೆ. ರೈಲ್ವೆ ಹಳಿ ದಾಟುವ ಬಗ್ಗೆ ಜಾಗೃತಿ ಮೂಡಿಸಲು ಯಮರಾಜನ ವೇಷಧಾರಿಯೊಬ್ಬನನ್ನು ನಿಯೋಜಿಸಿದೆ. ಈತ ಹಳಿ ಮೇಲೆ ಸಾಗುವ ಮಂದಿಯನ್ನು ತಡೆದು, ಅವರನ್ನು ಹೊತ್ತುಕೊಂಡು ಬಂದು ರಸ್ತೆಗೆ ಅಥವಾ ಪ್ಲಾಟ್‌ಫಾರ್ಮ್ ಮೇಲೆ ತಂದು ಬಿಡುತ್ತಾನೆ.
ಸೆಪ್ಟೆಂಬರ್ ನಲ್ಲಿ, ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿತಾಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ಲಾಟ್‌ಫಾರ್ಮ್ ದಾಟಲು ಯತ್ನಿಸುತ್ತಿದ್ದ ವೃದ್ಧೆಯೊಬ್ಬರು ಹಳಿಗಳ ಮೇಲೆ ಜಾರಿಬಿದ್ದಿದ್ದರು.
ಈ ವೇಳೆ ವೇಗವಾಗಿ ಬರುತ್ತಿದ್ದ ರೈಲಿನ ಕೆಳಗೆ ಸಿಲುಕಿದ್ದು, ಅದೃಷ್ಟವಶಾತ್ ಬದುಕುಳಿದಿದ್ದರು. ಈ ಘಟನೆ ಸಾಕಷ್ಟು ಸುದ್ದಿಯಾಗಿತ್ತು. ಆದ್ದರಿಂದ ಈ ರೀತಿ ಪ್ರಕರಣಗಳನ್ನು ತಡೆಯಲು ರೈಲ್ವೆ ಇಲಾಖೆ ಯಮರಾಜನನ್ನು ನೇಮಿಸುವ ಮೂಲಕ ಹೊಸ ಯೋಜನೆ ರೂಪಿಸಿದೆ.
ಬೆಂಗಳೂರಿನಲ್ಲಿ ಹೆಲ್ಮೆಟ್ ಕುರಿತು ಅರಿವು ಮೂಡಿಸಲು ಸಂಚಾರ ಪೊಲೀಸರು ಕೂಡ ಇಂಥದ್ದೇ ಉಪಾಯ ಮಾಡಿದ್ದರು. ಹೆಲ್ಮೆಟ್ ಹಾಕದೆ ಗಾಡಿಯಲ್ಲಿ ತೆರಳುವಾಗ ಹಿಂದಿನಿಂದ ಗಧೆ ಹಿಡಿದು ಬೈಕ್ ಹಿಂದೆ ಓಡಿಬರುತ್ತಿದ್ದರು.












Click it and Unblock the Notifications