ಕ್ಯಾಂಪಾ ಕೋಲಾ ನಿವಾಸಿಗಳಿಗೆ 'ಸುಪ್ರೀಂ' ಆಘಾತ
ಮುಂಬೈ, ನ.19: ಇಲ್ಲಿನ ಕ್ಯಾಂಪಾ ಕೋಲಾ ಅಪಾರ್ಟ್ಮೆಂಟ್ ನಿವಾಸಿಗಳಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. 102ಕ್ಕೂ ಅಧಿಕ ಕುಟುಂಬಗಳಿಗೆ ಇತ್ತೀಚೆಗೆ ಸಿಕ್ಕಿದ್ದ ತಾತ್ಕಾಲಿಕ ನೆಮ್ಮದಿಗೆ ಮಂಗಳವಾರ ಭಂಗವುಂಟಾಗಿದೆ. ಮೇ 31, 2014 ರ ತನಕ ಕಟ್ಟಡ ನೆಲಸಮ ಕಾರ್ಯಕ್ಕೆ ಬ್ರೇಕ್ ಬೀಳಲಿದೆ ಎಂದು ಕುಟುಂಬಸ್ಥರು ನೆಮ್ಮದಿ ಪಡುವ ಬೆನ್ನಲೇ ಮೇಲ್ಕಂಡ ದಿನಾಂಕದೊಳಗೆ ಮನೆ ತೊರೆಯುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಮೇ 31, 2014 ರೊಳಗೆ ಕ್ಯಾಂಪ ಕೋಲಾ ಅಪಾರ್ಟ್ ಮೆಂಟ್ ಖಾಲಿ ಮಾಡಲೇಬೇಕು ಎಂದು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ(ನ.19) ಅಂತಿಮ ಗಡುವು ನೀಡಿದೆ.
ದಕ್ಷಿಣ ಮುಂಬೈನ ವೊರ್ಲಿ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ 15 ಅಂತಸ್ತಿನ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಮೇ 31ರೊಳಗೆ ಖಾಲಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಅಪಾರ್ಟ್ ಮೆಂಟ್ ತೆರವು ವಿರೋಧಿಸಿ ಅಪಾರ್ಟ್‌ಮೆಂಟ್ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಪ್ರಕರಣ ಸಂಬಂಧ ಮಧ್ಯಪ್ರವೇಶಿಸಿರುವ ಸುಪ್ರೀಂ ಕೋರ್ಟ್, ಫ್ಲಾಟ್ ತೆರವಿಗೆ 7 ತಿಂಗಳ ಕಾಲಾವಕಾಶ ನೀಡಲಾಗಿತ್ತು.
7 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದಿದ್ದ ಕ್ಯಾಂಪ ಕೋಲಾ, ಅಕ್ರಮವಾಗಿ 15 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿತ್ತು. ಹೀಗಾಗಿ 102 ಫ್ಲಾಟ್ ಗಳ ತೆರವಿಗೆ ಬಿಎಂಸಿ ಆದೇಶಿಸಿತ್ತು. ಆದರೆ ಕಟ್ಟಡ ತೆರವಿಗೆ ಅಪಾರ್ಟ್‌ಮೆಂಟ್ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಅಕ್ರಮವಾಗಿ ನಿರ್ಮಿಸಲಾಗಿರುವ ಮತ್ತು ವಾಸಯೋಗ್ಯ ಪತ್ರ ಇಲ್ಲದ 102 ಫ್ಲಾಟ್ ಗಳ ವಾಸ್ತವ್ಯ ತೆರವುಗೊಳಿಸಲು ಸುಪ್ರೀಂ ಕೋರ್ಟ್ ನ.11ರ ಅಂತಿಮ ಗಡುವು ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಹಿಡಿದುಕೊಂದು ಗಡುವು ಮುಗಿಯುತ್ತಿದ್ದಂತೆಯೇ ಅಕ್ರಮ ಮಹಡಿಗಳನ್ನು ಧ್ವಂಸಗೊಳಿಸಲು ಮುಂಬೈ ಮಹಾನಗರಪಾಲಿಕೆ ಸಿಬ್ಬಂದಿ ಆಗಮಿಸಿದ್ದರು. ಇದಕ್ಕೂ ಮುನ್ನ ಕಟ್ಟಡಗಳ ವಿದ್ಯುತ್, ನೀರು ಮತ್ತು ಅನಿಲ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿತ್ತು.
ಆದರೆ, ಅಪಾರ್ಟ್ ಮೆಂಟ್ ನಿಂದ ಹೊರಕ್ಕೆ ಹೋಗಲು ಒಪ್ಪದ ನಿವಾಸಿಗಳು ಮುಷ್ಕರ ನಡೆಸಿದ್ದರು. ಪಾಲಿಕೆ ಸಿಬ್ಬಂದಿಗೆ ತೀವ್ರ ಪ್ರತಿರೋಧ ಒಡ್ಡಿದ್ದರು. ಅಪಾರ್ಟ್ ಮೆಂಟ್ ರಕ್ಷಿಸಲು ಸುಗ್ರೀವಾಜ್ಞೆ ಹೊರಡಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿವಾಸಿಗಳು ಒತ್ತಾಯಿಸಿದ್ದರು. ಆದರೆ ಈ ಒತ್ತಾಯಕ್ಕೆ ಮಣಿಯಲು ಮುಖ್ಯಮಂತ್ರಿ ಪೃಥ್ವಿರಾಜ ಚವಾಣ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಆಪಾರ್ಟ್ಮೆಂಟ್ ನಿವಾಸಿಗಳ ಬೆಂಬಲಕ್ಕೆ ಬಿಜೆಪಿ ಹಾಗೂ ಆರೆಸ್ಸೆಸ್ ನಿಂತಿದ್ದರಿಂದ ವಿಷಯ ರಾಜಕೀಯ ಬಣ್ಣ ಪಡೆದಿತ್ತು. ನ.13 ರಂದು ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ಮೇ 31 ರ ತನಕ ಕಟ್ಟಡ ನೆಲಸಮಗೊಳ್ಳುವುದಿಲ್ಲ ಎಂಬ ಭರವಸೆ ಕೋರ್ಟಿನಿಂದ ಪಡೆಯಲಾಗಿತ್ತು. ಆದರೆ, ನ.19 ರಂದು ಜಸ್ಟೀಸ್ ಜಿಎಸ್ ಸಿಂಘ್ವಿ, ಜಸ್ಟೀಸ್ ಸಿ ನಾಗಪ್ಪನ್ ಅವರಿದ್ದ ಪೀಠ ನೀಡಿರುವ ಆದೇಶದಂತೆ ಮೇ 31ರೊಳಗೆ ಕ್ಯಾಂಪಾ ಕೋಲಾ ನಿವಾಸಿಗಳು ತಮ್ಮ ಈಗಿನ ನಿವಾಸಗಳನ್ನು ತೊರೆಯಬೇಕಾಗಿದೆ.












Click it and Unblock the Notifications