ಮಹಾ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಅಶೋಕ್ ಚವಾಣ್ ಸೇರಿ 51 ಅಭ್ಯರ್ಥಿಗಳು
ಮುಂಬೈ, ಸೆ.30: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್, ಪಕ್ಷದ ರಾಜ್ಯಾಧ್ಯಕ್ಷ ವಿಜಯ್ ಬಾಳಾಸಾಹೇಬ್ ಥೋರಟ್ ಸೇರಿದಂತೆ 51 ಮಂದಿ ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಭೀಕಾರ್ ಕ್ಷೇತ್ರದಿಂದ ಅಶೋಕ್ ಚವಾಣ್, ಸಂಗಮ್ನಾರ್ ಕ್ಷೇತ್ರದಿಂದ ವಿಜಯ್ ಥೋರಟ್ ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಅವರ ಮಗ ಅಮಿತ್ ಅವರು ಲಾತೂರ್ ನಗರ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ. ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ ಪ್ರಣಿತಿ ಅವರು ಸೋಲಾಪುರ್ ನಗರ ಸೆಂಟ್ರಲ್ ಸೀಟಿನಿಂದ ಸ್ಪರ್ಧಿಸಲು ಟಿಕೆಟ್ ಪಡೆದುಕೊಂಡಿದ್ದಾರೆ.

ಹಿರಿಯ ನಾಯಕ ನಿತಿನ್ ರಾವತ್ ಅವರು ನಾಗಪುರ್ ಉತ್ತರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ಹಾಗೂ ಕಾಂಗ್ರೆಸ್ ತಲಾ 125 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲಿವೆ.
2014ರಲ್ಲಿ ಈ ಎರಡು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. 15 ವರ್ಷಗಳ ಮೈತ್ರಿ ಮುರಿದು ಬಿದ್ದಿತ್ತು. ಇದರ ಪರಿಣಾಮ ಕಾಂಗ್ರೆಸ್ 42 ಹಾಗೂ ಎನ್ ಸಿಪಿ 41 ಸ್ಥಾನ ಮಾತ್ರ ಗಳಿಸಲು ಸಾಧ್ಯವಾಗಿತ್ತು. ಬಿಜೆಪಿ 122 ಸ್ಥಾನ ಗಳಿಸಿತ್ತು.
ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಹೊರಬರಲಿದೆ.












Click it and Unblock the Notifications