ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಿ: ಸಿಎಂ ಉದ್ಧವ್ ಠಾಕ್ರೆಗೆ ಏಕನಾಥ್ ಶಿಂದೆ ಉತ್ತರ
ಮುಂಬೈ, ಜೂನ್ 21: ಮಹಾರಾಷ್ಟ್ರದಲ್ಲಿ ಜೂನ್ ತಿಂಗಳಲ್ಲಿ ರಾಜಕೀಯ ಹೈಡ್ರಾಮಾ ಘಟಿಸುತ್ತಿದೆ. ಅತಿಹೆಚ್ಚು ಸ್ಥಾನ ಹೊಂದಿದ್ದರೂ ವಿಪಕ್ಷ ಸ್ಥಾನದಲ್ಲಿ ಕೂತಿರುವ ಬಿಜೆಪಿ ಈಗ ಅಧಿಕಾರದ ಮೇಲೆ ಕಣ್ಣಿಟ್ಟಿರುವಂತಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ನೆರವಿನಿಂದ ಆಡಳಿತಾರೂಢ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟಕ್ಕೆ ಬಿಜೆಪಿ ಶಾಕ್ ಕೊಟ್ಟಿತು. ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದು ಹೆಚ್ಚುವರಿ ಸ್ಥಾನವನ್ನು ಕಸಿದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇಲ್ಲಿಯೂ ಬಿಜೆಪಿಗೆ ಕ್ರಾಸ್ ವೋಟಿಂಗ್ ನೆರವಿಗೆ ಬಂದಿದೆ.
ಶಿವಸೇನೆ ಮುಖಂಡ ಸಚಿವ ಏಕನಾಥ್ ಶಿಂದೆ ಹಲವು ಶಾಸಕರೊಂದಿಗೆ ಗುಜರಾತ್‌ಗೆ ಹೋಗಿ ಕೂತಿದ್ದಾರೆ. ಸೂರತ್‌ನ ರೆಸಾರ್ಟ್‌ವೊಂದರಲ್ಲಿ ಏಕನಾಥ್ ಶಿಂದೆ ಜೊತೆ 20ಕ್ಕೂ ಹೆಚ್ಚು ಶಾಸಕರು ಇರುವ ಅಂದಾಜು ಇದೆ. ಪರಿಷತ್ ಚುನಾವಣೆಯ ವೇಳೆ ಬಿಜೆಪಿ ಪರ ಶಿವಸೇನಾದ ಕೆಲ ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದರು. ಇದರ ಹಿಂದೆ ಏಕನಾಥ್ ಪಾತ್ರ ಇದೆ ಎಂಬ ಶಂಕೆಯ ಮೇಲೆ ಸಿಎಂ ಉದ್ಭವ್ ಠಾಕ್ರೆ ಸೋಮವಾರ ಕೆಡಿಕಾರಿದ್ದರು. ಆಗಲೇ ಶಿಂಧೆ ತಮ್ಮ ಜೊತೆ ಹಲವು ಶಾಸಕರನ್ನು ಸೂರತ್‌ಗೆ ಕರೆದೊಯ್ದು ಕೂತಿರುವುದು.
ಈಗ ಏಕನಾಥ್ ಶಿಂದೆಯನ್ನು ಪುಸಲಾಯಿಸಲು ಶಿವಸೇನಾ ನಾಯಕ ಮಿಲಿಂದ್ ನಾರ್ವೇಕರ್ ಅವರನ್ನು ಸಿಎಂ ಕಳುಹಿಸಿದರು. ಎರಡು ಗಂಟೆಯ ಭೇಟಿಯಲ್ಲಿ ನಾರ್ವೇಕರ್‌ಗೆ ಯಾವುದೇ ಫಲ ಸಿಗಲಿಲ್ಲ. ನಂತರ ಉದ್ಭವ್ ಠಾಕ್ರೆಯೇ ಖುದ್ದಾಗಿ ಫೋನ್‌ನಲ್ಲಿ ಹತ್ತು ನಿಮಿಷ ಕಾಲ ಶಿಂದೆ ಜೊತೆ ಮಾಡಿದರು.

ಬಿಜೆಪಿಗೆ ಬೆಂಬಲಿಸಿ ಎಂದ ಶಿಂಧೆ:
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಹತ್ತು ನಿಮಿಷ ಫೋನ್‌ನಲ್ಲಿ ಮಾತನಾಡಿದ ಏಕನಾಥ್ ಶಿಂಧೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿದ್ದು ತನಗೆ ಸರಿಕಾಣಿಸುತ್ತಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದರೆನ್ನಲಾಗಿದೆ. ಶಿವಸೇನೆಯ ಬೇರೆ ಶಾಸಕರಿಗೂ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಇಷ್ಟವಿಲ್ಲ. ನೀವು ಬಿಜೆಪಿ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳಿ ಎಂದು ಉದ್ಧವ್ ಠಾಕ್ರೆಗೆ ಶಿಂಧೆ ತಿಳಿಸಿದ್ದಾರೆ.
ಶಿವಸೇನಾದ ನಾಯಕರು ಮತ್ತು ಕಾರ್ಯಕರ್ತರಿಗೆ ಬಿಜೆಪಿ ಕಿರುಕುಳ ಕೊಡುತ್ತಿತ್ತು. ತಮ್ಮ ಪಕ್ಷಕ್ಕೆ ಬಿಜೆಪಿ ಸರಿಯಾದ ಬೆಲೆ ಕೊಡಲಿಲ್ಲ ಎಂದು ಉದ್ಧವ್ ಠಾಕ್ರೆ ನೀಡಿದ ಸಮಜಾಯಿಷಿ ಶಿಂಧೆಗೆ ಸಮಾಧಾನ ತರಲಿಲ್ಲವೆನ್ನಲಾಗಿದೆ.
|
ಶಿವಸೇನಾ ಹಿಂದುತ್ವ ಕೈಬಿಟ್ಟಿದೆ
ಇನ್ನು, ತಮ್ಮನ್ನು ಭೇಟಿ ಮಾಡಿದ ಶಿವಸೇನಾ ಶಾಸಕ ಮಿಲಿಂದ್ ನಾರ್ವೇಕರ್ ಅವರಿಗೂ ಏಕನಾಥ್ ಶಿಂಧೆ ಬಹಳ ನೇರ ಮಾತಿನಲ್ಲಿ ತಮ್ಮ ಇರಾದೆ ತಿಳಿಸಿದ್ಧಾರೆ.
"ಶಿವಸೇನಾ ತನ್ನ ಹೃದಯದಿಂದ ಹಿಂದುತ್ವವನ್ನು ಕೈ ಬಿಟ್ಟಿದೆ. ನಾನು ಹಿಂದುತ್ವದ ಜೊತೆ ಇದ್ದೇನೆ. ಬಾಳಾ ಠಾಕ್ರೆ ಸಾಹೇಬರು ನನಗೆ ಹಿಂದುತ್ವ ಕಲಿಸಿದ್ದಾರೆ. ಹಿಂದುತ್ವ ಇಲ್ಲದ ಶಿವಸೇನಾಗೆ ನಾನು ಮರಳಲಾರೆ" ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
"ನಾವು ಬಾಳಾ ಸಾಹೇಬರ ಕಟ್ಟಾಳುಗಳು. ಬಾಳಾ ಸಾಹೇಬರು ನಮಗೆ ಹಿಂದುತ್ವ ಕಲಿಸಿದ್ದಾರೆ. ಅವರ ಚಿಂತನೆ ಮತ್ತು ಆನಂದ್ ದಿಘೆ ಸಾಹೇಬರ ಚಿಂತನೆಗೆ ನಾವು ಎಂದಿಗೂ ಮೋಸ ಮಾಡಲು ಸಾಧ್ಯವಿಲ್ಲ" ಎಂದು ಏಕನಾಥ್ ಶಿಂದೆ ಟ್ವೀಟ್ ಕೂಡ ಮಾಡಿದ್ಧಾರೆ.

ದೇವೇಂದ್ರ ಫಡ್ನವಿಸ್ ಮಾಸ್ಟರ್‌ಪ್ಲಾನ್?
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈಗ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಹಿಂದಿನ ರೂವಾರಿ ಎನ್ನಲಾಗುತ್ತಿದೆ. ರಾಜ್ಯಸಭೆ ಮತ್ತು ಪರಿಷತ್ ಚುನಾವಣೆಗಳಲ್ಲಿ ಬಿಜೆಪಿ ಪರ ಕ್ರಾಸ್ ವೋಟಿಂಗ್ ಬರುವಂತೆ ನೋಡಿಕೊಂಡಿದ್ದಾರೆ. ಇಂದು ಮಂಗಳವಾರ ಅಮಿತ್ ಶಾ ಅವರನ್ನು ಫಡ್ನವಿಸ್ ಭೇಟಿಯಾಗಿದ್ಧಾರೆ. ಏಕನಾಥ್ ಶಿಂಧೆ ಹಾಗು ಇತರ ಶಾಸಕರಿಗೆ ಗುಜರಾಥ್‌ನ ಸೂರತ್‌ನಲ್ಲಿ ಸುರಕ್ಷಿವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಶಿಂಧೆ ಸಹಾಯದಿಂದ ರಾಜ್ಯದಲ್ಲಿ ತಮ್ಮ ಪಕ್ಷ ಸರಕಾರ ರಚಿಸಲು ಮುಕ್ತವಾಗಿದೆ ಎಂದು ಹೇಳಿದ್ದಾರೆ. ಇದರೊಂದಿಗೆ ಬಿಜೆಪಿಯ ಇರಾದೆ ಇನ್ನೂ ಸ್ಪಷ್ಟವಾಗಿದೆ.

ಶಿಂಧೆ ಏನು ಮಾಡಲು ಸಾಧ್ಯ?
ಏಕನಾಥ್ ಶಿಂಧೆ ಜೊತೆ ಇಪ್ಪತ್ತಕ್ಕೂ ಹೆಚ್ಚು ಶಾಸಕರು ಇದ್ದಾರೆನ್ನಲಾಗಿದೆ. ಶಿಂಧೆ ಹೇಳಿಕೊಂಡಿರುವ ಪ್ರಕಾರ ಅವರ ಬಳಿ 35 ಶಾಸಕರು ಇದ್ದಾರೆ. ಒಂದು ವೇಳೆ ಇದು ನಿಜವೇ ಆದಲ್ಲಿ ಪಕ್ಷಾಂತರ ವಿರೋಧಿ ಕಾನೂನಿಗೆ ಒಳಪಡಬೇಕಾಗುವುದಿಲ್ಲ. ಬಿಜೆಪಿಗೆ ಬಹುಮತ ಸುಲಭವಾಗುತ್ತದೆ. 106 ಸ್ಥಾನಗಳನ್ನು ಹೊಂದಿರುವ ಬಿಜೆಪಿಗೆ ಬಹುಮತ ಬರಲು ಇನ್ನೂ 37 ಶಾಸಕರ ಅಗತ್ಯ ಇದೆ. ಶಿಂಧೆ ಬಣದ 35 ಶಾಸಕರು ಬಂದರೆ ಕೇವಲ ಇಬ್ಬರು ಶಾಸಕರ ಕೊರತೆ ಮಾತ್ರ ಬೀಳುತ್ತದೆ.
ಮಹಾರಾಷ್ಟ್ರ ವಿಧಾನಸಭೆಯ ಬಲಾಬಲ 288. ಅದರಲ್ಲಿ ಒಂದು ಸ್ಥಾನ ಸದ್ಯ ಖಾಲಿ ಇದೆ. ಇನ್ನುಳಿದ 287 ಸ್ಥಾನಗಳ ಪೈಕಿ ಬಿಜೆಪಿ 106, ಶಿವಸೇನಾ 55, ಎನ್‌ಸಿಪಿ 53 ಮತ್ತು ಕಾಂಗ್ರೆಸ್ 44 ಸದಸ್ಯರನ್ನು ಹೊಂದಿವೆ. ಪಕ್ಷೇತರರು 13 ಮಂದಿ ಇದ್ದಾರೆ. ಇತರ ಪಕ್ಷಗಳ ಸದಸ್ಯರು 13 ಮಂದಿ ಇದ್ದಾರೆ.
ಬಿಜೆಪಿಗೆ ಬಹುಮತಕ್ಕೆ 144 ಸಂಖ್ಯೆ ಬೇಕು. ಶಿಂಧೆ ಬಣ ಸಿಡಿದು ಬಂದರೂ ಪಕ್ಷೇತರರ ಬೆಂಬಲ ಬಿಜೆಪಿಗೆ ಬೇಕಾಗುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications