ಮುಂಬೈನಲ್ಲಿ ಶೇ.37ರಷ್ಟು ಓಮಿಕ್ರಾನ್ ಸೋಂಕಿತರಿಗೆ ಪ್ರಯಾಣದ ಇತಿಹಾಸವಿಲ್ಲ!
ಮುಂಬೈ, ಡಿಸೆಂಬರ್ 31: ಮುಂಬೈನಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು ಏರಿಕೆ ಕಾಣುತ್ತಿದೆ. ಈ ನಡುವೆ ಮುಂಬೈನಲ್ಲಿ ಡಿಸೆಂಬರ್ 21-ಡಿಸೆಂಬರ್ 22 ರ ನಡುವೆ ಯಾವುದೇ ಪ್ರಯಾಣದ ಇತಿಹಾಸ ಪತ್ತೆಯಾಗದ ಸ್ಥಳೀಯ ಮುಂಬೈಯಿಗರಲ್ಲಿ ಪತ್ತೆಯಾದ ಕೊರೊನಾ ವೈರಸ್ ಪ್ರಕರಣಗಳ ಪೈಕಿ ಶೇಕಡ 37 ಓಮಿಕ್ರಾನ್ ಪ್ರಕರಣಗಳು ಆಗಿದೆ. ಅಂದರೆ ಶೇಕಡ 37ರಷ್ಟು ಮಂದಿ ಓಮಿಕ್ರಾನ್ ಸೋಂಕಿತರಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಶುಕ್ರವಾರ ಹೇಳಿದೆ.
ಇನ್ನು ಸಂಗ್ರಹಿಸಲಾದ 375 ಮಾದರಿಗಳ ಪೈಕಿ 141 ಓಮಿಕ್ರಾನ್ ರೂಪಾಂತರವಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಪ್ರಕರಣಗಳಲ್ಲಿ ಯಾರಿಗೂ ಯಾವುದೇ ಪ್ರಯಾಣದ ಇತಿಹಾಸವಿಲ್ಲ. 141 ಓಮಿಕ್ರಾನ್ ಸೋಂಕಿತರ ಪೈಕಿ 89 ಪುರುಷರು ಮತ್ತು 52 ಮಹಿಳೆಯರು ಆಗಿದ್ದಾರೆ. ಇನ್ನು 141 ಜನರ ಪೈಕಿ 93 ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಮೂರು ಮಂದಿ ಕೋವಿಡ್ ಲಸಿಕೆಯ ಒಂದು ಡೋಸ್ ಅನ್ನು ಪಡೆದುಕೊಂಡಿದ್ದಾರೆ.
ಏಳು ಮಂದಿಯಲ್ಲಿ ಮಧ್ಯಮ ರೋಗಲಕ್ಷಣಗಳು, 39 ಮಂದಿಯಲ್ಲಿ ಸೌಮ್ಯ ರೋಗಲಕ್ಷಣಗಳು ಮತ್ತು 95 ಮಂದಿಯಲ್ಲಿ ಯಾವುದೇ ಕೊರೊನಾ ವೈರಸ್ ಸೋಂಕು ಲಕ್ಷಣಗಳು ಇಲ್ಲ. "ಮಧ್ಯಮ ರೋಗಲಕ್ಷಣ ಹೊಂದಿರುವ ಏಳು ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಅವರು ಆಕ್ಸಿಜನ್ ಬೆಂಬಲಿತವಾಗಿಲ್ಲ," ಎಂದು ಬಿಎಂಸಿ ಪ್ರಕಟಣೆ ತಿಳಿಸಿದೆ.

ನಗರದಲ್ಲಿ ಒಮಿಕ್ರಾನ್ ಸೋಂಕಿನ ಒಟ್ಟು 153 ವ್ಯಕ್ತಿಗಳಲ್ಲಿ, 12 ಜನರು ಮಾತ್ರ ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ ಎಂದು ನಾಗರಿಕ ಸಂಸ್ಥೆ ತಿಳಿಸಿದೆ. ಓಮಿಕ್ರಾನ್ ಹೊಂದಿರುವ 141 ಮುಂಬೈ ನಿವಾಸಿಗಳಲ್ಲಿ, ಅತಿ ಹೆಚ್ಚು 21 ಜನರು ಅಂಧೇರಿ ವೆಸ್ಟ್, ಜುಹು ಮತ್ತು ವರ್ಸೋದ ಡಿ ವಾರ್ಡ್‌ನವರು ಆಗಿದ್ದಾರೆ. ಮಲಬಾರ್ ಹಿಲ್, ಮಹಾಲಕ್ಷ್ಮಿ ಮತ್ತು ತಾರ್ಡಿಯೊ ಪ್ರದೇಶದ ಡಿ ವಾರ್ಡ್‌ನವರು ಕೂಡಾ ಇದ್ದಾರೆ.
ಮುಂಬೈನಲ್ಲಿ ಭಾರತದ ಮೊದಲ ಓಮಿಕ್ರಾನ್ ಸಾವು
ಈ ನಡುವೆ ಮುಂಬೈನಲ್ಲೇ ಭಾರತದ ಮೊದಲ ಓಮಿಕ್ರಾನ್ ಸಾವು ಪ್ರಕರಣ ವರದಿ ಆಗಿದೆ. ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲಿದ 52 ವರ್ಷದ ವ್ಯಕ್ತಿಯೊಬ್ಬರು ತೀವ್ರ ಹೃದಯಾಘಾತದಿಂದ ಪ್ರಾಣ ಬಿಟ್ಟಿರುವ ಘಟನೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್‌ನಲ್ಲಿ ನಡೆದಿದೆ.
ಓಮಿಕ್ರಾನ್ ಸೋಂಕು ತಗುಲಿದ ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಸಾವಿಗೆ ಓಮಿಕ್ರಾನ್ ಸೋಂಕು ಕಾರಣ ಎಂದು ಪರಿಗಣಿಸದಂತೆ ಹೇಳಲಾಗುತ್ತಿದೆ. ಇದರ ಹೊರತಾಗಿ ರಾಜ್ಯದಲ್ಲಿ ಒಂದೇ ದಿನ ಅತಿಹೆಚ್ಚು ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 24 ಗಂಟೆಗಳಲ್ಲೇ 198 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 450ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಶುರುವಾಯಿತಾ ಎಂಬ ಪ್ರಶ್ನೆಯೂ ಕೂಡಾ ಬಂದಿದೆ. ಮುಂಬೈನಲ್ಲಿ ಕೊರೊನಾವೈರಸ್ ಮೂರನೇ ಅಲೆ ಪ್ರಾರಂಭವಾಗಿದೆ ಎಂದು ಮಹಾರಾಷ್ಟ್ರದ ಕೊವಿಡ್ ಟಾಸ್ಕ್ ಫೋರ್ಸ್ ಸದಸ್ಯ ಡಾ.ಶಶಾಂಕ್ ಜೋಶಿ ಹೇಳಿದ್ದಾರೆ.
ಇನ್ನೊಂದು ಕಡೆಯಲ್ಲಿ ಬ್ರೀಚ್ ಕ್ಯಾಂಡಿ, ಜಸ್ಲೋಕ್, ಭಾಟಿಯಾ ಮತ್ತು ರಿಲಯನ್ಸ್ ಆಸ್ಪತ್ರೆಯ ಡಾ. ಹೇಮಂತ್ ಠಾಕೂರ್, ಭಾರತವು ಆರು ವಾರಗಳಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ ಕುಸಿತ ಕಂಡಿದೆ ಎಂದು ಹೇಳಿದ್ದಾರೆ. ಕೊರೊನಾವೈರಸ್ ಸೋಂಕಿತರ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಶೇ.80ರಷ್ಟು ಜನರಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಮುಂಬೈನಲ್ಲಿ ಕೊವಿಡ್-19 ಮೂರನೇ ಅಲೆ ಶುರುವಾಗಿದೆ ಎಂದು ಡಾ.ಶಶಾಂಕ್ ಜೋಶಿ ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications