ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ಜೊತೆಗಿನ ಫೋಟೋ ವೈರಲ್: ಮಹಿಳೆ ಹೇಳಿದ್ದೇನು?
ಮಂಗಳೂರು, ಏಪ್ರಿಲ್ 6: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಂಜೀವ ಮಠಂದೂರು ಮಹಿಳೆ ಜೊತೆಗಿರುವಂತಹ ಖಾಸಗಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಶಾಸಕರು ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಜೆಪಿ ಟಿಕೆಟ್ ಘೋಷಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಪುತ್ತೂರಿನ ಹಾಲಿ ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರ ಫೋಟೋ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಶಾಸಕರ ಖಾಸಗಿ ಫೋಟೋಗಳು ಬಿಜೆಪಿಗೆ ಇರುಸು ಮುರುಸು ತಂದಿದೆ ಎನ್ನಲಾಗಿದೆ.

ವೈರಲ್ ಆಗುತ್ತಿರುವ ಫೋಟೋದ ಬಗ್ಗೆ ಮಹಿಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ನನ್ನ ವೈಯುಕ್ತಿಕ ಫೋಟೋಗಳನ್ನು ಪುತ್ತೂರು ಶಾಸಕರ ಜೊತೆ ಹೊಂದಾಣಿಕೆ ಮಾಡಿ ಎಡಿಟ್ ಮಾಡಲಾಗಿದೆ. ಇದರಿಂದಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ನೋವು ಉಂಟಾಗಿದೆ. ಒಬ್ಬ ಮಹಿಳೆಯಾಗಿರುವ ನನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ' ಎಂದಿದ್ದಾರೆ.
ನನಗೆ ಮತ್ತು ಪುತ್ತೂರು ಶಾಸಕರಿಗೆ ಯಾವುದೇ ರೀತಿಯ ಸಂಬಂಧ ಇಲ್ಲ. ನಾನು ಈ ಹಿಂದೆ ಅವರನ್ನು ಎಲ್ಲಿಯೂ ಭೇಟಿಯಾಗಿಲ್ಲ. ನನ್ನ ವೈಯಕ್ತಿಕ ಫೋಟೋಗಳನ್ನು ಅವರ ಜೊತೆ ಸೇರಿಸಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇದರ ಬಗ್ಗೆ ನಾನು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಫೋಟೋಗಳನ್ನು ಎಡಿಟ್ ಮಾಡಿ ಬೆದರಿಕೆ ಕರೆಗಳು ಕೂಡ ಬರುತ್ತಿದೆ. ನಾನು ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಇನ್ನು ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಇಂದು ಮುಂದುವರಿದ ಸಾಮಾಜಿಕ ಯುಗದಲ್ಲಿ ಯಾರ್ಯಾರ ಫೋಟೋವನ್ನು ಯಾರ್ಯಾರ ಜೊತೆ ಎಡಿಟ್ ಮಾಡುವ ಜನರಿದ್ದಾರೆ. ಒಬ್ಬ ಮಹಿಳೆಯ ಮೇಲೆ ಇಷ್ಟು ದೊಡ್ಡ ಆರೋಪ ಮಾಡುವುದು ಸರಿಯಲ್ಲ. ಇದನ್ನು ಮಾಡಿದವರಿಗೆ ಸೂಕ್ತವಾದ ಶಿಕ್ಷೆ ಆಗಬೇಕು ಎಂದು ಮಹಿಳೆ ಒತ್ತಾಯಿಸಿದ್ದಾರೆ.
ಅಶ್ಲೀಲ ಫೋಟೋ ವೈರಲ್ ವಿರುದ್ಧ ದೂರು ನೀಡಿದ ಶಾಸಕರು: ತನಿಖೆಗೆ ಕ್ರಮ
ಅಶ್ಲೀಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಗ್ಗೆ ಶಾಸಕರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫೋಟೋದಲ್ಲಿರುವುದು ನಾನಲ್ಲ, ನನ್ನ ಫೋಟೋವನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎಂದು ಸಂಜೀವ ಮಠಂದೂರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ ಯಾರೋ ಎಡಿಟ್ ಮಾಡಿ ವೈರಲ್ ಮಾಡುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದು, ಈ ಫೋಟೋವನ್ನು ವೈರಲ್ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಸ್ತುತ ಉಪ್ಪಿನಂಗಡಿ ಪೊಲೀಸರು ಐಟಿ ಆಕ್ಟ್ ಅಡಿ ಎಫ್.ಐ.ಆರ್ ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ.
ಇನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಆಪ್ತ ಸಹಾಯಕ ವಸಂತ ಎಸ್ ಘಟನೆ ಕುರಿತು ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾಸಕ ಸಂಜೀವ ಮಠಂದೂರು ಅವರ ಮಾನ ಹಾನಿ ಮಾಡಿ ಫೋಟೋ ಪ್ರಸಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಚುನಾವಣಾ ಸಮಯದಲ್ಲಿ ಅಪಪ್ರಚಾರ ಮಾಡಿ ಮಹಿಳೆಯ ಫೋಟೋದೊಂದಿಗೆ ಮಠಂದೂರು ಅವರ ಫೋಟೋ ಸೇರಿಸಿ ಫೇಸ್‌ಬುಕ್, ವಾಟ್ಸಪ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications