ಆತ್ಮಹತ್ಯೆಗೆ ಯತ್ನ: ತಾಯಿ ಸಾವು, ಮಕ್ಕಳ ಸ್ಥಿತಿ ಗಂಭೀರ
ಮಂಗಳೂರು, ಫೆಬ್ರವರಿ 05: ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿಯ ಉಜಿರೆ ಬೆಳಾಲು ರಸ್ತೆಯ ಓಡಲ ಎಂಬಲ್ಲಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಇಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವಮೊಗ್ಗ ಮೂಲದ ಮಹಿಳೆ ತಮ್ಮ ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ಬೇಬಿ (23 ) ಎಂದು ಗುರುತಿಸಲಾಗಿದೆ.
ಅವರ ಅವಳಿ ಮಕ್ಕಳಾದ ಎರಡು ವರ್ಷ ಎಂಟು ತಿಂಗಳ ಪ್ರಾಯದ ಅಕ್ಷರ ಹಾಗೂ ಅಪ್ಸರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಬೇಬಿ ಅವರ ಗಂಡ ಪ್ರವೀಣ್ ಉಜಿರೆಯ ಸೆಲೂನೊಂದರಲ್ಲಿ ಕೆಲಸ ಮಾಡುತ್ತಿದ್ದು, ಸೋಮವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ ಹಾಗೂ ಮಕ್ಕಳು ನೇಣಿನಲ್ಲಿ ನೇತಾಡುತ್ತಿರುವುದನ್ನು ಕಂಡು ಪ್ರವೀಣ್ ತತ್‌ಕ್ಷಣ ಪತ್ನಿ ಹಾಗೂ ಮಕ್ಕಳನ್ನು ನೇಣಿನಿಂದ ಕೆಳಗಿಳಿಸಿದ್ದಾರೆ. ಆದರೆ ಅದಾಗಲೇ ಬೇಬಿ ಕೊನೆಯುಸಿರೆಳೆದಿದ್ದರು.
ಆದರೆ ಗಂಭೀರ ಸ್ಥಿತಿಯಲ್ಲಿದ್ದ ಮಕ್ಕಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications