ಪತಿ ಅಗಲಿಕೆಯ ನಂತರ ವಾಚ್ ರಿಪೇರಿಯಲ್ಲೇ ಜೀವನ ಕಟ್ಟಿಕೊಂಡ ಮಂಗಳೂರಿನ ಪ್ರೀಮಾ ವಾಝ್
ಮಂಗಳೂರು, ಜನವರಿ 4: ನಾರಿ ಅಬಲೆಯಲ್ಲ ಸಬಲೆ ಎನ್ನುವುದನ್ನು ಅನೇಕ ಮಹಿಳಾ ಸಾಧಕಿಯರು ಈಗಾಗಲೇ ನಿರೂಪಿಸಿದ್ದಾರೆ. ನಾನಾ ಕ್ಷೇತ್ರದಲ್ಲಿ ಸಾಧಿಸಿ ಪ್ರಪಂಚದ ಗಮನ ಸೆಳೆದಿರುವ ಸಾಧಕಿಯರ ನಡುವೆ ಮಂಗಳೂರಿನ ಮಹಿಳೆಯೊಬ್ಬರು ವಾಚ್ ರಿಪೇರಿ ಮಾಡುವ ಮೂಲಕ ಸ್ವಾಭಿಮಾನಿಯಾಗಿ ಜೀವನ ಮಾಡುತ್ತಿದ್ದಾರೆ.
ಮನೆಗೆ ಆಧಾರಸ್ತಂಭವಾಗಿದ್ದ ಪತಿ ಇಹಲೋಕ ತ್ಯಜಿಸಿದಾಗ ಮುಂದಿನ ಬದುಕಿಗೆ ದಾರಿ ಕಾಣದಾಗ ಪತ್ನಿಗೆ ದಾರಿದೀಪವಾಗಿ ಕಂಡಿದ್ದು, ಪತಿ ಬಿಟ್ಟು ಹೋದ ವಾಚ್ ರಿಪೇರಿ ಅಂಗಡಿ. ಪತಿಯ ಜೊತೆಗೆ ವಾಚ್ ರಿಪೇರಿಗೆ ಸಹಕರಿಸುತ್ತಿದ್ದ ಪತ್ನಿ ಈಗ ಓರ್ವ ಸುಧಾರಿತ ವಾಚ್ ಮೆಕ್ಯಾನಿಕ್ ಆಗಿದ್ದಾರೆ.
ಈ ಸಾಧಕಿ ಮಹಿಳೆ ಮಂಗಳೂರು ನಗರದ ಕೊಟ್ಟಾರ ನಿವಾಸಿ ಪ್ರೀಮಾ ವಾಝ್. ಕೊಟ್ಟಾರದಲ್ಲಿರುವ ಜಾನ್ ವಾಚ್ ಸೆಂಟರ್‌ನ ಮಾಲಕಿ ಆಗಿರುವ ಪ್ರೀಮಾ ಅವರ ಜೀವನ ಹಲವರಿಗೆ ಮಾದರಿಯಾಗಿದೆ.

ವಾಚ್ ರಿಪೇರಿಯಲ್ಲಿ ಬದುಕು ಕಟ್ಟಿಕೊಂಡ ಮಂಗಳೂರಿನ ಮಹಿಳೆ
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರೂ, ವಾಚ್ ರಿಪೇರಿಯಂತಹ ಸೂಕ್ಷ್ಮ ಕಾರ್ಯದಲ್ಲಿ ತೊಡಗಿಕೊಳ್ಳುವುದು ಬಹು ಅಪರೂಪ. ಪ್ರೀಮಾ ವಾಝ್ ವಾಚ್ ರಿಪೇರಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಲ್ಲಿ ಮೊದಲಿಗರು ಎನ್ನುವ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ 10 ವರ್ಷಗಳಿಂದ ಏಕಾಂಗಿಯಾಗಿ ವಾಚ್ ರಿಪೇರಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಪ್ರೀಮಾ ಇದರಿಂದ ಬಂದ ಗಳಿಕೆಯಿಂದ ದಿನ ನಿತ್ಯದ ಜೀವನ ನಿರ್ವಹಣೆ ಜೊತೆಗೆ ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ.

ಪ್ರೀಮಾ ವಾಝ್ ಕೈ ಹಿಡಿದ ವಾಚ್ ರಿಪೇರಿ
ಪ್ರೀಮಾ ವಾಝ್ ಮೂಲತಃ ಪುತ್ತೂರಿನವರಾಗಿದ್ದು, ಮದುವೆಯಾದ ಬಳಿಕ ಮಂಗಳೂರಿನ ಕೊಟ್ಟಾರದಲ್ಲಿ ತಮ್ಮ ಪತಿ ಜೊತೆ ನೆಲೆಸಿದ್ದರು. ಆದರೆ ಪತಿಯ ಸಾವಿನ ಬಳಿಕ ಜೀವನ ನಿರ್ವಹಣೆಗಾಗಿ ಮುಂದೇನು ಎಂದು ಕಂಗಾಲಾಗಿದ್ದ ಪ್ರೀಮಾರ ಕೈ ಹಿಡಿದಿದ್ದು, ಪತಿ ನಡೆಸುತ್ತಿದ್ದ ವಾಚ್ ರಿಪೇರಿ ಅಂಗಡಿ. ಪತಿಯ ಜೊತೆ ವಾಚ್ ರಿಪೇರಿಯಲ್ಲಿ ಸಹಕರಿಸುತ್ತಿದ್ದ ಪ್ರೀಮಾರಿಗೆ ವಾಚ್ ರಿಪೇರಿಯ ಸ್ಪಷ್ಟ ಅನುಭವವಿಲ್ಲದಿದ್ದರೂ, ಧೈರ್ಯ ಮಾಡಿ ವಾಚ್ ರಿಪೇರಿಯ ಕಾರ್ಯಕ್ಕೆ ಮುಂದಾಗಿದ್ದರು. ಈ ಧೈರ್ಯಕ್ಕೆ ಗ್ರಾಹಕರೂ ಸಾಥ್ ನೀಡಿದ ಕಾರಣ ಓರ್ವ ಉತ್ತಮ ವಾಚ್ ಮೆಕ್ಯಾನಿಕ್ ಆಗಿ ಗುರುತಿಸಿಕೊಂಡಿದ್ದಾರೆ.

ಮಗಳ ವಿದ್ಯಾಭ್ಯಾಸ ಜವಾಬ್ದಾರಿ ಹೊತ್ತಿದ್ದ ಪ್ರೀಮಾ
ಯಾವುದೇ ಬ್ರಾಂಡ್‌ನ ವಾಚ್, ಗೋಡೆ ಗಡಿಯಾರಗಳನ್ನು ಬಿಚ್ಚಿ ಅದನ್ನು ರಿಪೇರಿ ಮಾಡುವ ಚಾಕಚಕ್ಯತೆಯನ್ನು ಪ್ರೀಮಾ ವಾಝ್ ಮೈಗೂಡಿಸಿಕೊಂಡಿದ್ದಾರೆ. ಗಡಿಯಾರ ಅಂಗಡಿಯಲ್ಲೇ ಜೀವನ ಕಟ್ಟಿಕೊಂಡಿರುವ ಪ್ರೀಮಾ, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕಷ್ಟದ ದಿನಗಳು ಎದುರಿಸಿದ್ದರು. ಮಗಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತಿದ್ದ ಪ್ರೀಮಾಗೆ ಕೊರೊನಾ ಲಾಕ್‌ಡೌನ್ ದೊಡ್ಡ ಹೊಡೆತವನ್ನೇ ನೀಡಿತ್ತು. ಆದರೆ ಬಳಿಕದ ದಿನಗಳಲ್ಲಿ ಕಷ್ಟಗಳನ್ನೆಲ್ಲಾ ಬಗೆಹರಿಸಿ ಸದ್ಯ ಯಾವುದೇ ಜಂಜಾಟವಿಲ್ಲದೆ ಆರಾಮವಾಗಿ ತನ್ನ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರೀಮಾ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ
ಮನೆಯ ದುಡಿಯುವ ಕೈ ಅರ್ಧದಲ್ಲೇ ಬಾರದ ಲೋಕಕ್ಕೆ ಹೋದಾಗ ಮನೆ ಮಹಿಳೆ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ ಕಂಗಾಲಾಗುವುದು ಸಾಮಾನ್ಯ. ಆದರೆ ಪ್ರೀಮಾ ತನ್ನ ಭವಿಷ್ಯದ ಜೊತೆಗೆ ತನ್ನ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಉದಾಹಣೆಯಾಗಿದ್ದಾರೆ. ಪ್ರೀಮಾ ಅವರ ಧೈರ್ಯ ಹಾಗೂ ಶೃದ್ಧೆಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅವರ ಕೆಲಸಕ್ಕೆ ಸ್ಥಳೀಯರು ಕೂಡ ಸಹಕರಿಸಿದ್ದಾರೆ.












Click it and Unblock the Notifications