ವಿಸ್ಟಾಡಾಮ್ ಕೋಚ್ ರೈಲು ಸಂಚಾರ; 73 ಸೀಟುಗಳು ಬುಕ್
ಬೆಂಗಳೂರು, ಜುಲೈ 09; ನೈಋತ್ಯ ರೈಲ್ವೆ ಕರ್ನಾಟಕದ ಮೊದಲ ವಿಸ್ಟಾಡಾಮ್ ಕೋಚ್ ರೈಲು ಸಂಚಾರ ಆರಂಭಿಸಲು ಸಿದ್ಧತೆ ನಡೆಸಿದೆ. ಯಶವಂತಪುರ-ಮಂಗಳೂರು ರೈಲಿನಲ್ಲಿ ವಿಸ್ಟಾಡಾಮ್ ಕೋಚ್‌ನಲ್ಲಿ ಸಂಚಾರ ನಡೆಸಲು 73 ಜನರು ಟಿಕೆಟ್ ಬುಕ್ ಮಾಡಿದ್ದಾರೆ.
ರಾಜಧಾನಿ ಬೆಂಗಳೂರು ಮತ್ತು ಕರಾವಳಿಯನ್ನು ಸಂಪರ್ಕಿಸುವ 3 ರೈಲುಗಳಿಗೆ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿ ತೆಗೆದು ತಲಾ 2 ವಿಸ್ಟಾಡಾಮ್ ಕೋಚ್ ಬೋಗಿ ಅಳವಡಿಕೆ ಮಾಡಲಾಗುತ್ತದೆ.
ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಹಗಲು ರೈಲಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಾಗಿದೆ. ಮಂಗಳೂರು ಜಂಕ್ಷನ್-ಯಶವಂತಪುರ ವಿಶೇಷ ರೈಲಿಗೂ ಕೋಚ್ ಅಳವಡಿಕೆ ಮಾಡಲಾಗಿದೆ.

ಒಂದು ವಿಸ್ಟಾಡಾಮ್ ಕೋಚ್ ರೈಲು ಬೋಗಿಯಲ್ಲಿ 44 ಪ್ರಯಾಣಿಕರು ಪ್ರಯಾಣಿಸಬಹುದು. ಬುಧವಾರ ಟಿಕೆಟ್ ಬುಕ್ಕಿಂಗ್ ಆರಂಭವಾದ ಗುರುವಾರ ಸಂಜೆಯ ತನಕ 73 ಸೀಟುಗಳು ಬುಕ್ ಆಗಿವೆ.
ವಾರಕ್ಕೆ ಮೂರು ಬಾರಿ ಸಂಚಾರ ನಡೆಸುವ ಯಶವಂತಪುರ-ಕಾರವಾರ (06211/ 06212) ರೈಲಿಗೆ ಸಹ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಾಗುತ್ತದೆ. ಈ ರೈಲಿನಲ್ಲಿ ಸಂಚಾರ ನಡೆಸಲು 31 ಸೀಟುಗಳು ಬುಕ್ ಆಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯಶವಂತಪು-ಮಂಗಳೂರು ರೈಲಿನ ವಿಸ್ಟಾಡಾಮ್ ಕೋಚ್‌ನಲ್ಲಿ ಸಂಚಾರ ನಡೆಸಲು ಯಶವಂತಪುರ-ಮಂಗಳೂರು ಜಂಕ್ಷನ್ - 1395 ರೂ., ಹಾಸನ-ಮಂಗಳೂರು ಜಂಕ್ಷನ್ - 960 ರೂ., ಹಾಸನ-ಸುಬ್ರಮಣ್ಯ ರಸ್ತೆ - 725 ರೂ., ಸಕಲೇಶಪುರ - ಸುಬ್ರಮಣ್ಯ ರಸ್ತೆ - 625 ರೂ., ಯಶವಂತಪುರ - ಸುಬ್ರಮಣ್ಯ ರಸ್ತೆ - 1175 ರೂ. ದರವನ್ನು ನಿಗದಿ ಮಾಡಲಾಗಿದೆ.
ವಿಸ್ಟಾಡಾಮ್ ಕೋಚ್‌ನ ಸೀಟುಗಳು 180 ಡಿಗ್ರಿ ತಿರುಗಲಿದ್ದು, ರೈಲಿನಲ್ಲಿ ಕುಳಿತು ಜನರು ಪ್ರಕೃತಿ ಸೌಂದರ್ಯ ಸವಿಯಬಹುದಾಗಿದೆ. ಬೆಂಗಳೂರು-ಮಂಗಳೂರು ರೈಲು ಸಾಗುವ ಮಾರ್ಗದಲ್ಲಿ ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ನಡುವೆ ಪಶ್ಚಿಮ ಘಟ್ಟದ ಹಸಿರು ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ದಟ್ಟವಾದ ಅರಣ್ಯ, ಅಲ್ಲಲ್ಲಿ ಕಾಣುವ ಜಲಪಾತ, ರೈಲು ಸುರಂಗ ಮಾರ್ಗ, ಶಿರಾಡಿ ಘಾಟ್‌ನ ಸೌಂದರ್ಯವನ್ನು ಜನರು ಸವಿಯಬಹುದಾಗಿದೆ. ಇನ್ನು ರೈಲು ಸಾಗುವಾಗ ಮಳೆ ಸುರಿಯುತ್ತಿದ್ದರೆ ಪಶ್ಚಿಮ ಘಟ್ಟದ ಸೌಂದರ್ಯ ಇಮ್ಮಡಿಯಾಗಿರುತ್ತದೆ.











Click it and Unblock the Notifications