ಮಂಗಳೂರು : ಕಣ್ಣೂರು ಮನೆ ಕುಸಿತ, ಇಬ್ಬರಿಗೆ ಗಾಯ
ಮಂಗಳೂರು, ಜೂ. 12 : ಮಂಗಳೂರು ನಗರದ ಹೊರವಲಯದ ಕಣ್ಣೂರಿನಲ್ಲಿ ಕಾಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಬಿದ್ದಿದ್ದರಿಂದ ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ಭಾರೀ ಮಳೆಯಿಂದಾಗಿ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ ಎಂದು ತಿಳಿದುಬಂದಿದೆ.
ಗುರುವಾರ ಸಂಜೆ ಕಣ್ಣೂರಿನಲ್ಲಿ ಮನೆ ಗೋಡೆ ಕುಸಿದು ಬಿದ್ದಿದ್ದು ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಯಾಸಿನ್ ಹಾಗೂ ಮುಮ್ತಾಜ್ ದಂಪತಿಗಳ ಮಕ್ಕಳಾದ ಸುನೈನಾ(18) ಹಾಗೂ ಶಂಶದ್(16) ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಡೆ ಕುಸಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ, ಸ್ಥಳೀಯ ಕಾರ್ಪೋರೇಟರ್ ಸುಧೀರ್ ಶೆಟ್ಟಿ, ಅಧಿಕಾರಿಗಳಾದ ಆಶೋಕ, ಡಿ.ಕೆ. ಗಣಪತಿ ಹಾಗೂ ಗಂಗಾಧರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಗೊಂಡ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಂಡಿದ್ದು, ಬುಧವಾರ ದಿನಪೂರ್ತಿ ಬಿಟ್ಟೂ ಬಿಟ್ಟೂ ಉತ್ತಮ ಮಳೆಯಾಗಿದೆ. ಗುರುವಾರವೂ ಮಳೆ ಮುಂದುವರೆದಿದೆ. ಮಳೆಯಿಂದಾಗಿ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. [ಮಂಗಳೂರು ಮಳೆಯ ಚಿತ್ರಗಳು]
ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಗೋಡೆ ಕುಸಿದು ಬಿದ್ದಿದೆ. ದೊಡ್ಡ ಶಬ್ದ ಕೇಳಿ ಸ್ಥಳೀಯರು ಬಂದು ನೋಡಿದಾಗ ಮಕ್ಕಳು ಅವಶೇಷಗಳ ಅಡಿ ಸಿಲುಕಿದ್ದರು. ಸತತ ಮೂರು ಗಂಟೆಗಳ ಕಾರ್ಯಾಚರಣೆ ನಂತರ ಸಂಜೆ ಆರು ಗಂಟೆ ವೇಳೆಗೆ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯಲ್ಲಿ 16 ವರ್ಷದ ಶಂಶದ್ ಕಾಲಿನ ಮೇಲೆ ಗೋಡೆಯ ಅವಶೇಷಗಳು ಕುಸಿದುಬಿದ್ದಿದ್ದು ಗಂಭೀರಗಾಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.












Click it and Unblock the Notifications