ಕಾಲೇಜು ವಿದ್ಯಾರ್ಥಿಗಳ ಟ್ರುಥ್ & ಡೇರ್ ಗೇಮ್‌ನಲ್ಲಿ ಲಿಪ್‌ಲಾಕ್: ವಿಡಿಯೋ ವೈರಲ್ ಮಾಡಿದವನ ಬಂಧನ
ಮಂಗಳೂರು, ಜುಲೈ 21: ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳ ಲಿಪ್‌ಲಾಕ್ ವೀಡಿಯೋವೊಂದು ವೈರಲ್ ಆಗಿದೆ. ಇದೀಗ ಈ ದೃಶ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿರುವ ವಿದ್ಯಾರ್ಥಿಯನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಪಿಯುಸಿ ವಿದ್ಯಾರ್ಥಿಗಳು ಖಾಸಗಿ ಕೊಠಡಿಯಲ್ಲಿ ಕಿಸ್ಸಿಂಗ್‌ನಲ್ಲಿ ತೊಡಗಿದ್ದರು. ಕಾಲೇಜು ಯೂನಿಫಾರಂನಲ್ಲೇ ಕಿಸ್ಸಿಂಗ್ ನಲ್ಲಿ ತೊಡಗಿರುವ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇದೇ ಕಾರಣದಿಂದ ಈ ವೀಡಿಯೋದಲ್ಲಿರುವುದು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳ ತಂಡದ ಮಧ್ಯೆಯಿದ್ದ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಗೆ ಲಿಪ್ ಲಾಕ್ ಮಾಡಿರುವ ವೀಡಿಯೋ ವೈರಲ್ ಆಗಿದೆ. ಇದೀಗ ಈ ವಿಡಿಯೋ ಮಾಡಿ ವೈರಲ್ ಮಾಡಿರುವ ವಿದ್ಯಾರ್ಥಿಯನ್ನ ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದ ಕ್ರಮಕ್ಕೆ ಮುಂದಾಗಿದ್ದಾರೆ.

ಈ ವೀಡಿಯೋದಲ್ಲಿ ಮೂವರು ಯುವಕರು ಹಾಗೂ ಮೂವರು ವಿದ್ಯಾರ್ಥಿನಿಯರಿದ್ದಾರೆ. ಮೂವರು ವಿದ್ಯಾರ್ಥಿನಿಯರು ಕಾಲೇಜು ಯೂನಿಫಾರಂ, ಐಡಿ ಕಾರ್ಡ್ ಸಹಿತ ಇದ್ದರೆ, ಉಳಿದ ಮೂವರು ಯುವಕರು ಯೂನಿಫಾರಂನಲ್ಲಿಲ್ಲ. ಸದ್ಯ ಪೊಲೀಸರು ವಿದ್ಯಾರ್ಥಿನಿಯರು ಹಾಗೂ ಆ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿದ್ದಾರೆ.
ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ಪ್ರಕರಣವು ಟ್ರುಥ್ ಅಂಡ್ ಡೇರ್ ಗೇಮ್ ಹಿನ್ನೆಲೆಯಲ್ಲಿ ನಡೆದಿದೆ. ಸದ್ಯ ಇದರ ವೀಡಿಯೋ ವೈರಲ್‌ಗೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಅಮಾನತು
ಈ ಬಗ್ಗೆ ಕಾಲೇಜಿಗೆ ಹೋಗಿ ಈಗಾಗಲೇ ಪರಿಶೀಲನೆ ನಡೆಸಿದ್ದೇನೆ. ಆದರೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಘಟನೆ ನಾಲ್ಕೈದು ತಿಂಗಳ ಹಿಂದೆ ನಡೆದಿದೆ. ಆದರೆ ವಾರದ ಹಿಂದೆ ವಿದ್ಯಾರ್ಥಿಯೋರ್ವನು ಈ ಲಿಪ್ ಲಾಕ್ ವೀಡಿಯೋವನ್ನು ಕಾಲೇಜು ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದಾನೆ. ಇದರಿಂದ ಎಚ್ಚೆತ್ತ ಪ್ರಾಧ್ಯಾಪಕರು ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ತಕ್ಷಣ ಪ್ರಾಂಶುಪಾಲರು ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಿದ್ದಾರೆ ಎಂದು ತನಿಖೆಯ ಸಂದರ್ಭ ತಿಳಿದು ಬಂದಿದೆ ಎಂದು ಪೊಲೀಸ್ ಕಮಿಷನರ್ ಹೇಳಿದರು.
ಈ ಕೃತ್ಯದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳಿಬ್ಬರು ಕಾಲೇಜು ಸಮೀಪದಲ್ಲಿಯೇ ಇರುವ ಅಪಾರ್ಟ್‌ಮೆಂಟ್ ನಲ್ಲಿದ್ದರು. ಈ ಅಪಾರ್ಟ್‌ಮೆಂಟ್ ನಲ್ಲಿಯೇ ಕೃತ್ಯ ನಡೆದಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಅಪಾರ್ಟ್‌ಮೆಂಟ್ ಮಾಲೀಕರು ಇದೀಗ ಈ ವಿದ್ಯಾರ್ಥಿಗಳು ಮದ್ಯಪಾನ ಮಾಡುತ್ತಾರೆಂದು ಹೊರಗೆ ಹಾಕಿದ್ದಾರೆ. ಕೃತ್ಯದ ವಿಚಾರದಲ್ಲಿ ಎಲ್ಲರನ್ನೂ ವಿಚಾರಣೆ ಮಾಡಲಾಗಿದೆ. ಆದರೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ವಿದ್ಯಾರ್ಥಿನಿಯರು ಅಪ್ರಾಪ್ತರೇ ಎಂದು ಪರಿಶೀಲನೆ ನಡೆಸಿ ಪೊಕ್ಸೋ ಪ್ರಕರಣ ದಾಖಲು ಮಾಡುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.












Click it and Unblock the Notifications