ಸೌಜನ್ಯ ಕೊಲೆ ಪ್ರಕರಣ: ಧರ್ಮಸ್ಥಳ ಹಾಗೂ ಕುಟುಂಬದ ಮೇಲಿನ ಆರೋಪ, ವೀರೇಂದ್ರ ಹೆಗ್ಗಡೆ ಮಹತ್ವದ ಪತ್ರಿಕಾ ಹೇಳಿಕೆ
ಮಂಗಳೂರು, ಆಗಸ್ಟ್ 02: ಸುಮಾರು ಹನ್ನೊಂದು ವರ್ಷಗಳ ಬಳಿಕ ಉಜಿರೆ ಎಸ್‌ಡಿಎಂ ಪದವಿ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮತ್ತೆ ಮುಖ್ಯ ಭೂಮಿಕೆಗೆ ಬಂದಿದೆ. ಈ ಪ್ರಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬದ ವಿರುದ್ಧ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳದ ಭಕ್ತರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 2012ರಲ್ಲಿ ನಡೆದ ಸೌಜನ್ಯ ಹತ್ಯೆಗೆ ನ್ಯಾಯ ದೊರಕಿಸಿಕೊಡಲು ನಮ್ಮ ಕುಟುಂಬ ಒತ್ತಾಯಿಸಿತ್ತು. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದೇವೆ. ಸಿಐಡಿ ಬಳಿಕ ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ತನಿಖೆ ನಡೆಸಿತ್ತು. ಇದೀಗ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇದೀಗ ಮತ್ತೆ ಕ್ಷೇತ್ರ ಹಾಗೂ ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣ ಸರ್ಕಾರ ಹಾಗೂ ತನಿಖಾ ಸಂಸ್ಥೆಯ ವ್ಯಾಪ್ತಿಯಲ್ಲಿದೆ. ಹೀಗಾಗಿ ಸರ್ಕಾರ ಹಾಗೂ ತನಿಖಾ ಸಂಸ್ಥೆ ಸೂಕ್ತ ನ್ಯಾಯ ಕೊಡಲು ಒತ್ತಾಯಿಸ್ತೇನೆ. ಸುಳ್ಳು ಹೇಳಿಕೆ ,ಅಪಾದನೆ, ವದಂತಿಗಳಿಗೆ ಭಕ್ತರು ಹಾಗೂ ಸಾರ್ವಜನಿಕರು ಗೊಂದಲಕ್ಕೀಡಾಬೇಡಿ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.
ವೀರೇಂದ್ರ ಹೆಗ್ಗಡೆ ಮಹತ್ವದ ಪತ್ರಿಕಾ ಹೇಳಿಕೆ..!
2012 ರಲ್ಲಿ ನಡೆದ ಪಾಂಗಳದ ನಿವಾಸಿ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯಳ ಹತ್ಯೆಯ ಪ್ರಕರಣದಲ್ಲಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಹೊರಬರುವಂತೆ ಸಿ.ಐ.ಡಿ. ನಂತರದಲ್ಲಿ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿ.ಬಿ.ಐ. ಮೂಲಕ ತನಿಖೆ ನಡೆಸುವಂತೆ ಸರಕಾರವನ್ನು ಶ್ರೀಕ್ಷೇತ್ರದ ಪರವಾಗಿ ಮತ್ತು ನಮ್ಮ ಕುಟುಂಬಸ್ಥರ ಪರವಾಗಿ ಒತ್ತಾಯಿಸಲಾಗಿತ್ತು. ಹಾಗೂ ಅದರಂತೆ ಸರ್ಕಾರ ಸದರಿ ಪ್ರಕರಣವನ್ನು ಸಿ.ಬಿ.ಐ. ತನಿಖೆ ನಡೆಸಲು ಆದೇಶಿಸಿರುತ್ತದೆ. ಅದರಂತೆ ತನಿಖೆ ನಡೆಸಿ, ಸದರಿ ಇಲಾಖೆ ಆರೋಪ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ.
ನಂತರದಲ್ಲಿ ಮಾನ್ಯ ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿತನನ್ನು ಸದರಿ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದು, ತಿಳಿದಿದೆ. ಆ ನಂತರದಲ್ಲಿ ಕೆಲವು ವ್ಯಕ್ತಿಗಳು ಶ್ರೀ ಕ್ಷೇತ್ರವನ್ನು ಹಾಗೂ ನಮ್ಮ ಕುಟುಂಬವನ್ನು ಗುರಿಯಾಗಿರಿಸಿಕೊಂಡು ಸುಳ್ಳು ಆರೋಪ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಇದರಿಂದ ಶ್ರೀ ಕ್ಷೇತ್ರದ ಭಕ್ತರಲ್ಲಿ ಹಾಗು ಕ್ಷೇತ್ರದೊಂದಿಗೆ ತೊಡಗಿಸಿಕೊಂಡಿರುವ ಅನೇಕರಿಗೆ ಖೇದ ಉಂಟಾಗಿದ್ದು, ಈ ಮೂಲಕ ಸಮಸ್ತ ಭಕ್ತಾದಿಗಳಲ್ಲಿ ಹಾಗೂ ಸಾರ್ವಜನಿಕರ ಗಮನಕ್ಕೆ ತರ ಬಯಸುವುದೆಂದರೆ ಈ ಪ್ರಕರಣದ ಬಗ್ಗೆ ಶ್ರೀ ಕ್ಷೇತ್ರದ ವತಿಯಿಂದ ಈಗಾಗಲೇ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು.
ಹಾಗು ಅದರಂತೆ ಸರ್ಕಾರ ಸದರಿ ಪ್ರಕರಣವನ್ನು ಸಿ.ಬಿ.ಐ. ತನಿಖೆ ನಡೆಸಲು ಆದೇಶಿಸಿರುತ್ತದೆ, ಆ ಪ್ರಕಾರ ಸರ್ಕಾರ ಅತ್ಯುನ್ನತ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿ, ನ್ಯಾಯಾಲಯಕ್ಕೆ ಪ್ರಕರಣವನ್ನು ವಿಚಾರಣೆಗಾಗಿ ಒಳಪಡಿಸಿರುತ್ತದೆ. ಪ್ರಸ್ತುತ ಸದರಿ ವಿಚಾರವು ನ್ಯಾಯಾಲಯ, ಸರ್ಕಾರ ಮತ್ತು ತನಿಖಾ ಸಂಸ್ಥೆಯ ವ್ಯಾಪ್ತಿಯಲ್ಲಿ ಇರುವುದರಿಂದ ಕು.
ಸೌಜನ್ಯಳ ಸಾವಿಗೆ ಸಂಬಂಧಿಸಿದಂತೆ ಮಾನ್ಯ ಸರ್ಕಾರ ಹಾಗು ತನಿಖಾ ಸಂಸ್ಥೆ ಸೂಕ್ತ ನ್ಯಾಯ ಒದಗಿಸಿ ಕೊಡುವಂತೆ ಒತ್ತಾಯಿಸುತ್ತೇನೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ಹಾಗೂ ಕ್ಷೇತ್ರದ ಬಗ್ಗೆ ಅವಹೇಳನಕಾರಿ, ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳನ್ನು ಹಚ್ಚಿಸುತ್ತಿರುವುದರ ಬಗ್ಗೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಗೊಂದಲಕ್ಕೀಡಾಬೇಡಿ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.












Click it and Unblock the Notifications