ತೋಟ ಬೆಂಗ್ರೆ ಬೀಚ್ ಗ್ಯಾಂಗ್ ರೇಪ್ ಪ್ರಕರಣ, ಮತ್ತಷ್ಟು ಮಾಹಿತಿಗಳು ಬಹಿರಂಗ
ಮಂಗಳೂರು, ನವೆಂಬರ್. 27: ಮಂಗಳೂರನ್ನೇ ಬೆಚ್ಚಿ ಬೀಳಿಸಿದ ತೋಟ ಬೆಂಗ್ರೆ ಬೀಚ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಒಂದೊಂದೆ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ.
ತೋಟ ಬೆಂಗ್ರೆ ಬೀಚ್ ಗೆ ವಿಹಾರಕ್ಕೆಂದು ಬಂದಿದ್ದ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು 7 ಜನರ ತಂಡವಲ್ಲ. ಬದಲಾಗಿ 8 ಜನ ದುಷ್ಕರ್ಮಿಗಳ ತಂಡ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನವೆಂಬರ್ 18 ರಂದು ನಡೆದಿದ್ದ ಈ ಅತ್ಯಾಚಾರ ಪ್ರಕರಣಕ್ಕೆ ಪೊಲೀಸರೇ ಮರುಜೀವ ನೀಡಿದ್ದಾರೆ. ಒಂದು ಹಂತದಲ್ಲಿ ಮುಚ್ಚಿಹೋಗಲಿದ್ದ ಈ ಘೋರ ಅತ್ಯಾಚಾರ ಪ್ರಕರಣವನ್ನು ಬೆಳಕಿಗೆ ತಂದದ್ದು ಪಣಂಬೂರು ಪೊಲೀಸರು. ಮೂಲಗಳಿಂದ ದೊರೆತ ಮಾಹಿತಿ ಮೇರೆಗೆ ಪಣಂಬೂರು ಪೊಲೀಸರು ತನಿಖೆ ಆರಂಭಿಸಿದ್ದರು.

ಸಾಕಷ್ಟು ಜನರ ವಿಚಾರಣೆ ಬಳಿಕ ಸಂತ್ರಸ್ತರ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಅವರ ಮನವೊಲಿಸಿದ ಹಿನ್ನೆಲೆಯಲ್ಲಿ ಸಂತ್ರಸ್ತರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆದರೆ ಸಂತ್ರಸ್ತ ಜೋಡಿಯ ಮಾಹಿತಿ ಗೋಪ್ಯವಾಗಿ ಇರಿಸಲಾಗಿದೆ.
ಘಟನೆ ನಡೆದ ತೋಟ ಬೆಂಗ್ರೆ ಬೀಚ್ ಗೆ ಸಂತ್ರಸ್ತರನ್ನು ಕರೆತಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಸಿಪಿ ಮಂಜುನಾಥ ಶೆಟ್ಟಿ, ಪಣಂಬೂರು ಹಾಗೂ ಮಹಿಳಾ ಠಾಣೆ ಇನ್ಸ್ ಪೆಕ್ಟರ್, ಸಿಬ್ಬಂದಿ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ತೋಟ ಬೆಂಗ್ರೆ ನಿವಾಸಿಗಳಾದ ಆದಿತ್ಯ, ಸುಜನ್, ಪ್ರಜ್ವಲ್, ಕಾರ್ತಿಕ್,ಚಿಂತನ್ , ಅರುಣ್ ಮತ್ತು ರಿಯಾಜ್ ಎಂದು ಗುರುತಿಸಲಾಗಿದೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರೆಲ್ಲರೂ ಮಾದಕ ವ್ಯಸನಿಗಳು ಎಂದು ಹೇಳಲಾಗಿದೆ.
ಆರೋಪಿಗಳ ವಿರುದ್ಧ ಪೊಲೀಸರು ಸೆಕ್ಷನ್ 376, 323, 504, 506ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.












Click it and Unblock the Notifications