ಎಲ್ಲೆಲ್ಲೂ ಮೀನಿನ ನೀರು, ದುರ್ವಾಸನೆಗೆ ಬೇಸತ್ತ ಮಂಗಳೂರಿಗರು
ಮಂಗಳೂರು, ಡಿಸೆಂಬರ್ 15: ಮಂಗಳೂರಿನ ರಸ್ತೆಗಳಲ್ಲಿ ಎಲ್ಲೆಲ್ಲೂ ಮೀನಿನ ದುರ್ವಾಸನೆ. ನಗರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೀನು ಸಾಗಾಟದ ವಾಹನಗಳ ಬೇಕಾ ಬಿಟ್ಟಿ ಚಾಲನೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ರಸ್ತೆಗಳಲ್ಲಿ ಮೀನಿನ ದುರ್ನಾತ ಬೀರಲಾರಂಭಿಸಿವೆ.
ರಾತ್ರಿ ಹಗಲೆನ್ನದೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮಂಗಳೂರು ನಗರದ ಎಲ್ಲಾ ರಸ್ತೆಗಳಲ್ಲೂ ಮೀನಿನ ನೀರನ್ನು ಚೆಲ್ಲುತ್ತಾ ಸಾಗುತ್ತಿರುವ ಈ ಲಾರಿಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ಅದರಲ್ಲೂ ಮಂಗಳೂರಿನ ಮಂಗಳಾದೇವಿ, ಮೋರ್ಗನ್ಸ್ ಗೇಟ್, ಜಪ್ಪಿನಮೊಗರು, ಮಾರ್ಗವಾಗಿ ಸಂಚರಿಸುವ ಈ ಮೀನಿನ ಲಾರಿಗಳು ಮಂಗಳೂರು-ಕಣ್ಣೂರು ರಾಷ್ಟ್ರೀಯ ಹೆದ್ದಾರಿಯನ್ನು ದುರ್ನಾತ ಬೀರುವ ರಸ್ತೆಯನ್ನಾಗಿ ಪರಿವರ್ತಿಸಿದೆ.
ಮೀನಿನ ದುರ್ನಾತ ಬೀರುವ ಈ ಮೀನಿನ ತ್ಯಾಜ್ಯದ ನೀರು ಜನರ ಆರೋಗ್ಯದ ಮೇಲೆ ಮಾತ್ರವಲ್ಲದೇ ಜನರ ಪ್ರಾಣಕ್ಕೂ ಕಂಟಕವಾಗುತ್ತಿವೆ. ರಸ್ತೆಯಲ್ಲಿ ಲಾರಿಗಳು ಚೆಲ್ಲಿಕೊಂಡು ಬರುವ ಮೀನಿನ ನೀರು ರಸ್ತೆಯಲ್ಲಿ ಸಾಗಿ ಬರುವ ಬೈಕ್ ಸವಾರರಿಗೆ ಮಾರಕವಾಗಿ ಪರಿಣಮಿಸುತ್ತಿವೆ. ರಸ್ತೆಯಲ್ಲಿ ಚೆಲ್ಲಿದ ಮೀನಿನ ನೀರು ಬೈಕ್ ಗಳು ಸ್ಕಿಡ್ ಆಗಲು ಕಾರಣವಾಗುತ್ತಿವೆ. ಹಲವಾರು ರಸ್ತೆ ಅಪಘಾತಗಳಿಗೆ ಈ ಮೀನಿನ ನೀರು ಕಾರಣವಾಗುತ್ತಿದೆ.

ಈ ಬಗ್ಗೆ ಪೋಲೀಸ್ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶವಿದೆ. ಪ್ರತಿ ಮೀನು ಸಾಗಾಟ ವಾಹನಗಳಲ್ಲಿಯೂ ಮೀನಿನ ನೀರು ಸಂಗ್ರಹವಾಗಲು ಟ್ಯಾಂಕ್ ವ್ಯವಸ್ಥೆಯನ್ನು ಮಾಡಲಾಗಿದ್ದರೂ, ಟ್ಯಾಂಕ್ ಗಳಲ್ಲಿ ತುಂಬಿದ ನೀರನ್ನು ನೇರವಾಗಿ ರಸ್ತೆಗೆ ಬೀಳುವಂತಹ ವ್ಯವಸ್ಥೆಯನ್ನು ಲಾರಿಯಲ್ಲಿ ಮಾಡಲಾಗಿದೆ.

ಪೋಲೀಸರು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಇದೇ ವಿಚಾರವಾಗಿ ಬೀದಿ ಸಂಘರ್ಷವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.












Click it and Unblock the Notifications