ಮಂಗಳೂರು ಬಂದರಿನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ
ಮಂಗಳೂರು, ಫೆ. 26 : ಮಂಗಳೂರಿನ ಜನರಿಗೊಂದು ಸಿಹಿ ಸುದ್ದಿ. ಮಂಗಳೂರಿನಲ್ಲಿ ಶೀಘ್ರವೇ ಸ್ಮಾರ್ಟ್ ಸಿಟಿ ನಿರ್ಮಾಣಗೊಳ್ಳಲಿದೆ. ನವಮಂಗಳೂರು ಬಂದರಿನಲ್ಲಿ ಸ್ಮಾರ್ಟ್‍ಸಿಟಿ ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ. ಈ ಯೋಜನೆ ಐದು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಮಂಗಳೂರಿನ ನವ ಮಂಗಳೂರು ಬಂದರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿರುವ 12 ಬಂದರುಗಳಲ್ಲಿ ಸ್ಮಾರ್ಟ್‍ಸಿಟಿ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. [ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ 11 ನಗರ?]

ಒಟ್ಟು 50 ಸಾವಿರ ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಪ್ರತಿ ಸ್ಮಾರ್ಟ್ ಸಿಟಿನಿರ್ಮಾಣಕ್ಕೆ 3 ರಿಂದ 4 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ನವಮಂಗಳೂರು ಬಂದರು ಸೇರಿದಂತೆ ಕಾಂಡ್ಲಾ, ಮುಂಬೈ, ಮರ್ಮಗೋವಾ, ಕೊಚ್ಚಿ, ವಿಶಾಖಪಟ್ಟಣಂ, ಪಾರಾದೀಪ್, ಕೋಲ್ಕತಾ ಸಹಿತ 12 ಬಂದರು ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಆಯ್ಕೆಯಾಗಿದೆ.
ಯಾವ ಸೌಲಭ್ಯಗಳು : ಸ್ಮಾರ್ಟ್ ಸಿಟಿ ನಿರ್ಮಾಣಗೊಂಡ ಬಂದರುಗಳಲ್ಲಿ ಅಗಲವಾದ ರಸ್ತೆ, ಹಸಿರು ವಲಯ, ಅಂತರಾಷ್ಟ್ರೀಯ ದರ್ಜೆಯ ಸೌಲಭ್ಯಗಳು, ವಿಶೇಷ ಆರ್ಥಿಕ ವಲಯ, ಹಡಗು ನಿರ್ಮಾಣ ಕೇಂದ್ರದಂತಹ ಸೌಲಭ್ಯಗಳು ದೊರೆಯಲಿವೆ. [ನೂರು ಸ್ಮಾರ್ಟ್ ಸಿಟಿಗಳ ನಿರ್ಮಾಣ ನಾಯ್ಡು ಗುರಿ]
ನೀರನ್ನು ಮರು ಶುದ್ಧೀಕರಣ ಮಾಡಿ ಬಳಸುವ ತಂತ್ರಜ್ಞಾನ, ಬಂದರಿನ ತ್ಯಾಜ್ಯವನ್ನು ಮರುಸಂಸ್ಕರಣೆ ಮಾಡುವ ಘಟಕ ತಲೆ ಎತ್ತಲಿವೆ. ಬಂದರು ವಲಯದಲ್ಲಿ ಶಾಲೆ, ವಾಣಿಜ್ಯ ಮಳಿಗೆಗಳು ಸೇರಿದಂತೆ ಇತರ ಸೌಲಭ್ಯಗಳು ದೊರೆಯಲಿವೆ.
5 ವರ್ಷದಲ್ಲಿ ಪೂರ್ಣ : ಮುಂದಿನ 6 ತಿಂಗಳಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭಗೊಳ್ಳಲಿದ್ದು, 5 ವರ್ಷಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಯೋಜನೆಗಳ ನಿರ್ಮಾಣ ಕಾಮಗಾರಿಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ನೀಡದೆ, ಸರ್ಕಾರವೇ ನಡೆಸಲಿದೆ.












Click it and Unblock the Notifications