ದೇಶ-ವಿದೇಶ ವೈರಲ್ ಆದ ಮಂಗಳೂರಿನ ಮುದ್ದು ಕರು
ಮಂಗಳೂರು, ಜೂನ್ 5: ಗೋಹತ್ಯೆ ನಿಷೇಧ ಸಂಬಂಧ ದೇಶದಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲೇ ಮುಕ್ತ ಮಾರುಕಟ್ಟೆಗಳಲ್ಲಿ ಗೋವುಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವುದನ್ನು ನಿಷೇಧಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಒಂದೆಡೆ ಗೋಹತ್ಯೆ ನಿಷೇಧದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಒಂದು ವರ್ಷ 6 ತಿಂಗಳ ಪುತ್ತೂರಿನ ಪುಟ್ಟ ಕರು ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ.

ಪುತ್ತೂರು ತಾಲೂಕಿನ ಉರಿಮಜಲೆಂಬ ಹಳ್ಳಿಯ ಪುಟ್ಟ ಹಟ್ಟಿಯೇ ಈ ಕರುವಿನ ವಾಸ ಸ್ಥಾನ. ಈಕೆ ವಯಸ್ಸು ಒಂದು ವರ್ಷ 6 ತಿಂಗಳು ಮಾತ್ರ. ಹೆಸರು ಗೌರಿ. ಕಳೆದ ನಾಲ್ಕೈದು ದಿನಗಳಲ್ಲಿ ದೇಶ-ವಿದೇಶದ ಮೂಲೆ ಮೂಲೆಗೂ ಸುತ್ತಿ ಬಂದಿದ್ದಾಳೆ. ಸಾಮಾಜಿಕ ತಾಣದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಶೇರ್ ಆಗಿ, ಸಿಕ್ಕಾಪಟ್ಟೆ ಹವಾ ಸೃಷ್ಟಿಸಿರುವ ಕರು ಇದು.
ಹವ್ಯಾಸಿ ಛಾಯಾಗ್ರಾಹಕರಾಗಿರುವ ಎಸ್. ಜಿ. ದತ್ತ ಉರಿಮಜಲು ಅವರು ತನ್ನ ಮನೆಯ ಕರುವಿಗೆ ನಾಲ್ಕು ತಿಂಗಳಾಗಿರುವಾಗ ತೆಗೆದ ಫೋಟೋವಿದು. ಈಗಿದಕ್ಕೆ 1 ವರ್ಷ 6 ತಿಂಗಳಾಗಿವೆ. ಫೋಟೋ ಸೆರೆ ಹಿಡಿದದ್ದು ಕಳೆದ ವರ್ಷವಾದರೂ ಸಾಮಾಜಿಕ ತಾಣದಲ್ಲಿ ವೈರಲ್ ಆದದ್ದು ಕಳೆದ ನಾಲ್ಕೈದು ದಿನಗಳಿಂದ. ಕಾರಣ ಕೇಂದ್ರ ಸರಕಾರದ ಗೋವುಗಳ ಮಾರಾಟ ನಿಷೇಧ ಕಾಯ್ದೆ.

ಗೋವು ಮಾರಾಟ ನಿಷೇಧ ಕಾಯ್ದೆಯಿಂದಾಗಿ ಒಂದು ವರ್ಷದ ಹಿಂದಿನ ಹಳೆಯ ಫೋಟೋ ಈಗ ದೇಶ-ವಿದೇಶದಲ್ಲಿಯೂ ಸುದ್ದಿ ಮಾಡುತ್ತಿದೆ ಎಂಬುದು ಸ್ವತಃ ದತ್ತ ಅವರಿಗೂ ಗೊತ್ತಿರಲಿಲ್ಲ. ಈಗಂತೂ ಕರು ಗೌರಿ ಭಾರತೀಯ ಗೋವು ಪ್ರಿಯರ ಪಾಲಿನ ಸೆಲೆಬ್ರಿಟಿ ಎನಿಸಿಕೊಂಡಿದೆ.
"ಪೇಸ್ ಬುಕ್ ಗೆಳೆಯರೊಬ್ಬರು ನನ್ನ ಅಕೌಂಟ್‌ನಿಂದ ತೆಗೆದು ಈ ಫೋಟೋವನ್ನು ಶೇರ್ ಮಾಡಿದ್ದಾರೆ. ಲಕ್ಷಕ್ಕೂ ಮಿಕ್ಕಿ ಶೇರ್ ಆಗಿದ್ದು, ನಮ್ಮ ದೇಶ ಮಾತ್ರವಲ್ಲ ಅಬುಧಾಬಿ ಸೇರಿದಂತೆ ವಿದೇಶಗಳಿಂದಲೂ ಕರೆ, ಸಂದೇಶಗಳು ಬರುತ್ತಿವೆ. ಈ ಫೋಟೋ ಇಷ್ಟೆಲ್ಲ ಹವಾ ಸೃಷ್ಟಿಸುತ್ತದೆ ಎಂದು ನನಗೇ ಗೊತ್ತಿರಲಿಲ್ಲ. ಈ ಗೋವಿನ ಚಿತ್ರವನ್ನು ವಾಟ್ಸಾಪ್ ಡಿಪಿ ಮಾಡಿಕೊಂಡು 'ಗೋಮಾತೆಯನ್ನು ಪ್ರೀತಿಸಿ' ಎಂಬ ಒಕ್ಕಣೆ ಹೊತ್ತ ಸಾಲುಗಳೊಂದಿಗೆ ಈ ಕರುವಿನ ಚಿತ್ರ ಗ್ರೂಪ್‌ನಿಂದ ಗ್ರೂಪ್ ಗೆ ಶೇರ್ ಆಗುತ್ತಲೇ ಇದೆ," ಎನ್ನುತ್ತಾರೆ ಎಸ್. ಜಿ. ದತ್ತ ಉರಿಮಜಲು.












Click it and Unblock the Notifications