ಮಂಗಳೂರು: ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದ ಪ್ರೊಫೆಸರ್ ಅಮಾನತು
ಮಂಗಳೂರು, ನ.28: ವಿದ್ಯಾರ್ಥಿಯನ್ನು ತರಗತಿಯೊಳಗೆ ಟೆರರಿಸ್ಟ್ ಅಂತಾ ಪ್ರೊಫೆಸರ್ ನಿಂದಿಸಿದ ಘಟನೆ ಉಡುಪಿಯ ಮಣಿಪಾಲ ಮಾಹೆ ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನಲ್ಲಿ ನಡೆದಿದೆ. ನವೆಂಬರ್ 26ರಂದು ಎಂಐಟಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಮುಸ್ಲಿಮರು ಟೆರರಿಸ್ಟ್ ಗಳು ಎಂಬ ಅರ್ಥದಲ್ಲಿ ಪ್ರೊಫೆಸರ್ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಭಾಷಣೆ ಯ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ಪ್ರೊಫೆಸರ್ ಮಾತಿಗೆ ತರಗತಿಯಲ್ಲೇ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಮುಸ್ಲಿಂ ಸಮುದಾಯವನ್ನು ಟೆರರಿಸ್ಟ್ ಎಂದು ಕರೆಯಬೇಡಿ. ಅನಗತ್ಯ ತಮಾಷೆಯಾಗಿ ಈ ರೀತಿ ಮಾತನಾಡಬೇಡಿ. ಇದು ತಮಾಷೆಯಲ್ಲ ಎಂದು ವಿದ್ಯಾರ್ಥಿ ಆಕ್ಷೇಪಿಸಿದ್ದಾನೆ.
ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆ ಪ್ರೊಫೆಸರ್ ಕ್ಷಮೆ ಕೇಳಿದ್ದಾರೆ. ಆದರೂ ಪಟ್ಟು ಬಿಡದ ವಿದ್ಯಾರ್ಥಿ ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ ಎಂದು ಆಕ್ಷೇಪಿಸಿದ್ದಾನೆ. ಈ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಉಪನ್ಯಾಸಕನ ವಿರುದ್ಧ ಕ್ರಮ ಮಾಹೆ ವಿವಿ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮೂಲಕ ಸಾಂತ್ವನ ಹೇಳಿದ್ದಾರೆ. ಈ ವಿಡಿಯೋವನ್ನು ತರಗತಿಯ ಒಳಗಿನ ವಿದ್ಯಾರ್ಥಿಗಳೇ ಚಿತ್ರೀಕರಣ ಮಾಡಿರುವ ಸಾಧ್ಯತೆಯಿದೆ.
ಈ ಘಟನೆಯ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಮಾಹೆ ವಿಶ್ವವಿದ್ಯಾಲಯ ,ಘಟನೆಯ ಬಗ್ಗೆ ಮಾಹೆ ವಿವಿ ಆಂತರಿಕ ತನಿಖೆ ನಡೆಸುತ್ತದೆ. ಪ್ರೊಫೆಸರ್ ಅವರನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಈ ರೀತಿಯ ಬೆಳವಣಿಗೆಯನ್ನು ನಮ್ಮ ವಿವಿ ಸಹಿಸುವುದಿಲ್ಲ. ಧರ್ಮ, ಪಂಥ, ಮತ, ಲಿಂಗಭೇದಕ್ಕೆ ನಮ್ಮ ವಿವಿಯಲ್ಲಿ ಆಸ್ಪದ ಇಲ್ಲ. ಮಾಹೆ ವಿವಿ ಸಂವಿಧಾನವನ್ನು ಎತ್ತಿ ಹಿಡಿಯುತ್ತದೆ ಎಂದು ಮಾಹೆ ವಿವಿಯ ಎಂ ಐ ಟಿ ವಿಭಾಗ ಸ್ಪಷ್ಟನೆ ನೀಡಿದೆ.












Click it and Unblock the Notifications