ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿ ಬಂಧನ
ಮಂಗಳೂರು, ಜೂನ್ 01: ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಗಳು ಅರಂಭವಾಗುತ್ತಿದ್ದಂತೆ ಕ್ರಿಕೆಟ್ ಬೆಟ್ಟಿಂಗ್ ದಂಧೆ ಕೂಡ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಇಲ್ಲಿನ ಬಲ್ಮಠದ ಸಮೀಪವೂ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಬುಕ್ಕಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೊಣಾಜೆ ನಿವಾಸಿ ಮೆಲ್ವಿನ್ ವಿಶ್ವಾಸ್ ಡಿಸೋಜಾ (35) ಎಂದು ಗುರುತಿಸಲಾಗಿದೆ.
ಈತ ಬಲ್ಮಠದ ರಸ್ತೆ ಬದಿಯ ಮಳಿಗೆಯೊಂದರಲ್ಲಿ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಒಂದು ಮೊಬೈಲ್ ಫೋನ್ ಮತ್ತು 5,200 ರೂಪಾಯಿ ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಗೋವಾದಲ್ಲಿಯೇ ಇರುತ್ತಿದ್ದ ವಿಶ್ವಾಸ್, ಪ್ಲೇ 365 ಆಪ್ ಮುಖೇನ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಆತನ ತಮ್ಮ ಡೆನಿಲ್ ಮೂಲಕ ನಗರದಲ್ಲಿ ಬೆಟ್ಟಿಂಗ್ ವ್ಯವಹಾರ ನಡೆಯುತ್ತಿತ್ತು. ವಿಶ್ವಾಸ್ ಬಗ್ಗೆ ಈ ಹಿಂದೆಯೇ ಪೊಲೀಸರು ಮಾಹಿತಿ ಸಂಗ್ರಹಿಸಿ ಬಂಧನಕ್ಕೆ ಬಲೆ ಬೀಸಿದ್ದರು.

ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೊದಲ ದಿನವೇ ಬೆಟ್ಟಿಂಗ್ ದಂಧೆಕೋರರಿಗೆ ಎಚ್ಚರಿಕೆ ನೀಡಿದ್ದರು. ಕಳೆದ ಐಪಿಎಲ್ ಸಂದರ್ಭದಲ್ಲೂ ಬೆಟ್ಟಿಂಗ್ ಗೆ ಸಂಬಂಧಿಸಿದಂತೆ ಪೊಲೀಸರು 18 ಪ್ರಕರಣಗಳನ್ನು ದಾಖಲಿಸಿರುವುದನ್ನು ಉಲ್ಲೇಖಿಸಿದ್ದರು. ವಿಶ್ವ ಕಪ್ ಕ್ರಿಕೆಟ್ ಸಂದರ್ಭದಲ್ಲಿ ಬೆಟ್ಟಿಂಗ್ ನಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದ್ದರು.












Click it and Unblock the Notifications